Home ಟಾಪ್ ಸುದ್ದಿಗಳು ಹರಿಯಾಣದಲ್ಲಿ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾಗಿದ್ದು ಗೋಮಾಂಸವಲ್ಲ: ಪೊಲೀಸರ ಸ್ಪಷ್ಟನೆ

ಹರಿಯಾಣದಲ್ಲಿ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾಗಿದ್ದು ಗೋಮಾಂಸವಲ್ಲ: ಪೊಲೀಸರ ಸ್ಪಷ್ಟನೆ

ಚಂಡೀಗಢ: ಗೋಮಾಂಸ ತಿಂದಿದ್ದಾರೆ ಎಂದು ಆರೋಪಿಸಿ ಹರಿಯಾಣದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಥಳಿಸಿ ಕೊಂದ ಪ್ರಕರಣ ಸಂಬಂಧ ಪ್ರಯೋಗಾಲಯ ವರದಿ ಬಂದಿದ್ದು, ಮೃತ ಕಾರ್ಮಿಕನ ಮನೆಯಲ್ಲಿ ಪತ್ತೆಯಾಗಿದ್ದು ಗೋಮಾಂಸವಲ್ಲ ಎಂಬುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಚಾರ್ಖಿ ದಾದ್ರಿ ಜಿಲ್ಲೆಯ ಹಂಸವಾಸ್ ಖುರ್ದ್ ಗ್ರಾಮದ ಸಬೀರ್ ಮಲಿಕ್ ಹತ್ಯೆ ಸಂಬಂಧ ಪೊಲೀಸರು ಈಗಾಗಲೇ ಹತ್ತು ಜನರನ್ನು ಬಂಧಿಸಿದ್ದಾರೆ.


‘ಸಬೀರ್ ಮಲಿಕ್ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಗುಡಿಸಲಿನಲ್ಲಿ ವಾಸವಾಗಿದ್ದ. ಆತನ ಹತ್ಯೆ ಬಳಿಕ ಮಾಂಸದ ಮಾದರಿಯನ್ನು ಸಂಗ್ರಹಿಸಿ ಫರಿದಾಬಾದ್ ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಕೈಸೇರಿದ್ದು, ಅದು ಗೋಮಾಂಸವಲ್ಲ ಎಂಬುದು ದೃಢಪಟ್ಟಿದೆ’ ಎಂದು ಬದ್ರಾ (ಚಾರ್ಖಿ ದಾದ್ರಿ) ಉಪ ಪೊಲೀಸ್ ವರಿಷ್ಠಾಧಿಕಾರಿ ಭರತ್ ಭೂಷಣ್ ಹೇಳಿದ್ದಾರೆ.


ಪ್ರಯೋಗಾಲಯದ ವರದಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಭೂಷಣ್ ಮಾಹಿತಿ ನೀಡಿದ್ದಾರೆ.


ಆಗಸ್ಟ್ 27ರಂದು ಸಬೀರ್ ಮಲಿಕ್ ದನದ ಮಾಂಸ ತಿಂದಿದ್ದಾನೆ ಎಂದು ಶಂಕಿಸಿ ಆರೋಪಿಗಳು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಅಂಗಡಿಗೆ ಕರೆದೊಯ್ದು ಮನಸೋಇಚ್ಛೆ ಥಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version