ಮೆಕ್ಸಿಕೋ: ಪ್ರೀತಿಸಿದವರನ್ನೇ ಮದುವೆಯಾಗಲು ಪ್ರೇಮಿಗಳು ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರಿಯತಮೆಯನ್ನು ವರಿಸಲು ತನ್ನ ಕಿಡ್ನಿಯನ್ನೇ ದಾನ ಮಾಡಿದ್ದಾನೆ. ಇಷ್ಟಾದರೂ ಆತನಿಗೆ ‘ಕೈಕೊಟ್ಟ’ ಪ್ರೇಯಸಿ ಬೇರೊಬ್ಬನ ಜೊತೆ ಮದುವೆಯಾಗಿದ್ದಾಳೆ.
ಈ ವಿಚಿತ್ರ ಘಟನೆ ನಡೆದಿರುವುದು ಮೆಕ್ಸಿಕೋದಲ್ಲಿ. ವೃತ್ತಿಯಲ್ಲಿ ಅಧ್ಯಾಪಕನಾಗಿರುವ ಉಝಿಲ್ ಮಾರ್ಟಿನೆಝ್ ತನ್ನ ಕಥೆ-ವ್ಯಥೆಯನ್ನು ‘ಟಿಕ್ ಟಾಕ್’ನಲ್ಲಿ ಹಂಚಿಕೊಂಡಿದ್ದಾನೆ. ‘ಟಿಕ್ ಟಾಕ್’ನಲ್ಲಿ ಸದ್ಯಕ್ಕೆ ‘ದುರದೃಷ್ಟಕರ ಪ್ರೇಮ ಕಥೆಗಳು’ ಟ್ರೆಂಡ್ ಆಗಿದ್ದು, ಇದರ ಭಾಗವಾಗಿ ಸರಣಿ ವೀಡಿಯೋಗಳಲ್ಲಿ ಮಾರ್ಟಿನೆಝ್ ತನ್ನ ಕಥೆ ಹೇಳಿಕೊಂಡಿದ್ದಾನೆ.
ಪ್ರೇಯಸಿಯ ತಾಯಿಯ ಜೀವ ಉಳಿಸಲು ನನ್ನ ಕಿಡ್ನಿಯನ್ನೇ ದಾನ ಮಾಡಿದೆ. ಆದರೆ ಶಸ್ತ್ರಚಿಕಿತ್ಸೆ ನಡೆದು ತಾಯಿ ಚೇತರಿಸಿಕೊಂಡ ಬಳಿಕ ಪ್ರೇಯಸಿ ಒಂದೇ ತಿಂಗಳ ಅಂತರದಲ್ಲಿ ಬೇರೊಬ್ಬನ ಜೊತೆ ವಿವಾಹವಾದಳು ಎಂದು ಮಾರ್ಟಿನೆಝ್ ವಿವರಿಸಿದ್ದಾನೆ. ಸದ್ಯಕ್ಕೆ ಈ ವೀಡಿಯೋ ಭಾರಿ ಟ್ರೆಂಡಿಂಗ್’ನಲ್ಲಿದ್ದು, ಈಗಾಗಲೇ 14 ಮಿಲಿಯನ್’ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
‘ನಾನು ಆಕೆಯನ್ನು ದ್ವೇಷಿಸುತ್ತಿಲ್ಲ. ಈಗ ನಾವು ಸ್ನೇಹಿತರಲ್ಲ – ಶತ್ರುಗಳೂ ಅಲ್ಲ’ ಎಂದು ಮಾರ್ಟಿನೆಝ್ ಹೇಳಿದ್ದಾನೆ. ಭಗ್ನಪ್ರೇಮಿ ಮಾರ್ಟಿನೆಝ್’ಗೆ ಬೆಂಬಲ ಸೂಚಿಸಿ ವೀಡಿಯೋದ ಕೆಳಗೆ ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ. ‘ ಈ ತಪ್ಪನ್ನು ಮತ್ತೆ ಮಾಡಬೇಡಿ’ ಎಂದು ನೆಟ್ಟಿಗನೋರ್ವ ಕಾಲೆಳೆದಿದ್ದಾನೆ