►ಒಡಿಸ್ಸಾ ಮೂಲದ ನೀರಜ್ ಸಿಂಗ್ ಬಂಧಿತ
ನವದೆಹಲಿ: ಮುಸ್ಲಿಮ್ ಮಹಿಳೆಯರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿದ “ಬುಲ್ಲಿ ಬಾಯಿ” ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಮರ್ತೋರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಒಡಿಸ್ಸಾ ಮೂಲದ ನೀರಜ್ ಸಿಂಗ್ ಬಂಧಿತ ಆರೋಪಿ.ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ವಿಶಾಲ್ ಜಾ, ಶ್ವೇತಾ ಸಿಂಗ್, ಮಯಾಂಕ್ ರಾವತ್ ಮತ್ತು ನೀರಜ್ ಬಿಶ್ಣೋಯಿ ಎಂಬವರನ್ನು ಬಂಧಿಸಲಾಗಿತ್ತು.
ಬುಲ್ಲಿ ಬಾಯಿ ಆ್ಯಪ್ ಮೂಲಕ ಮುಸ್ಲಿಂ ಸಮುದಾಯದ ಮಹಿಳೆಯರನ್ನು, ಅದರಲ್ಲಿಯೂ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡವರನ್ನು ಗುರಿ ಮತ್ತು ಅವರ ಚಿತ್ರಗಳನ್ನು ದುರ್ಬಳಕೆ ಮಾಡಲಾಗಿತ್ತು.
ಈ ಅಶ್ಲೀಲ ಆಪ್ನಲ್ಲಿ ತಮ್ಮ ಚಿತ್ರಗಳನ್ನು ಕಂಡ ಕೆಲವು ಮುಸ್ಲಿಂ ಮಹಿಳೆಯರಿಂದಾಗಿ ಬುಲ್ಲಿ ಬಾಯಿ ಆಪ್ ವಿವಾದ ಜ. 1ರಂದು ಬೆಳಕಿಗೆ ಬಂದಿದೆ. ಗಿಟ್ ಹಬ್ ಎಂಬ ವೇದಿಕೆಯು ಈ ಆಪ್ ಅನ್ನು ರೂಪಿಸಿದ್ದು, ಮಹಿಳೆಯರ ಚಿತ್ರಗಳನ್ನು ಬಳಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಚಿತ್ರಗಳನ್ನು ತಿದ್ದಲಾಗಿದೆ.
ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಮಹಿಳೆಯರು, ಎಲ್ಲ ವಯೋಮಾನದ ಗುಂಪಿನವರನ್ನು ಇಲ್ಲಿ ಗುರಿ ಮಾಡಲಾಗಿದೆ. ಹೆಸರಾಂತ ಪತ್ರಕರ್ತೆಯರು, ಕಾರ್ಯಕರ್ತೆಯರು, ವಕೀಲರು ಮುಂತಾದವರು ಈ ಆಪ್ನಲ್ಲಿ ‘ಹರಾಜು’ ಪ್ರಕ್ರಿಯೆಗೆ ಒಳಗಾಗಿದ್ದಾರೆ.
‘ಡೀಲ್ ಆಫ್ ದಿ ಡೇ’ ಎಂದು ತಮ್ಮನ್ನು ಮಾರಾಟ ಮಾಡುತ್ತಿರುವ ಚಿತ್ರವನ್ನು ಪತ್ರಕರ್ತೆಯೊಬ್ಬರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. 2020ರ ಜುಲೈನಲ್ಲಿ ಬೆಳಕಿಗೆ ಬಂದಿದ್ದ ಸುಲ್ಲಿ ಡೀಲ್ಸ್ನಲ್ಲಿ 80ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವರ ಒಪ್ಪಿಗೆ ಇಲ್ಲದೆ ಬಳಸಲಾಗಿತ್ತು.