ಮಂಗಳೂರು : 2009ರಲ್ಲಿ ನಡೆದ ಹಿಂದು ಯುವತಿಯರ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿ ‘ಲವ್ ಜಿಹಾದ್’ ಎಂದು ಬೊಬ್ಬಿರಿದು, ಬಳಿಕ ಅದೊಂದು ಸರಣಿ ಹಂತಕನ ಕೃತ್ಯ ಎಂದು ಗೊತ್ತಾಗುತ್ತಲೇ ಮೌನವಾಗಿದ್ದ ಸ್ವಾಮೀಜಿಯೊಬ್ಬರು ಇದೀಗ ಮತ್ತೆ ‘ಲವ್ ಜಿಹಾದ್’ ಹೈಡ್ರಾಮಾಕ್ಕೆ ಮುಂದಾಗಿದ್ದಾರೆ.
ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ, ರಾಜಶೇಖರಾನಂದ ಅವರು 2009ರಲ್ಲಿ ಬಂಟ್ವಾಳದ ಅನಿತಾ ಎಂಬ ಯುವತಿಯ ನಾಪತ್ತೆ ವಿಚಾರದಲ್ಲಿ ಭಾರಿ ಪ್ರತಿಭಟನೆಗಳನ್ನು ಮಾಡಿ ಸುದ್ದಿಯಾಗಿದ್ದರು. ಆ ವೇಳೆ ಅವರು ಆ ಪ್ರಕರಣದ ಹಿಂದೆ ‘ಲವ್ ಜಿಹಾದ್’ ಸಂಚು ಇದೆ ಎಂದು ಪ್ರತಿಪಾದಿಸಿದ್ದರು.
ಆದರೆ, ಕೆಲವು ದಿನಗಳ ಬಳಿಕ ಅನಿತಾ ಸೇರಿದಂತೆ ಹಲವು ಹಿಂದು ಯುವತಿಯರು ಸೈನೈಡ್ ಮೋಹನ್ ಎಂಬ ಸರಣಿ ಹಂತಕನ ವಂಚನೆಯ ಜಾಲಕ್ಕೆ ಸಿಲುಕಿ ಪ್ರಾಣ ತೆತ್ತಿರುವುದು ಬೆಳಕಿಗೆ ಬಂದಿತ್ತು. ಆ ನಂತರ ಈ ಬಗ್ಗೆ ಮಾತನಾಡದ ಸ್ವಾಮೀಜಿ ಇದೀಗ ಉಡುಪಿಯ ಪೆರ್ಡೂರ್ ನಲ್ಲಿ ‘ಲವ್ ಜಿಹಾದ್’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜಕೀಯ ದುರುದ್ದೇಶದ ದ್ವೇಷ ಭಾಷಣ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಮೋಹನನ ಪುರಾಣ ಬಿಚ್ಚಿಟ್ಟಿದ್ದ ಅನಿತಾ ಪ್ರಕರಣ : ಬಂಟ್ವಾಳ ಬರಿಮಾರು ನಿವಾಸಿ ಅನಿತಾ ನಾಪತ್ತೆ ಪ್ರಕರಣ ಸೈನೈಡ್ ಮೋಹನನ ಪುರಾಣ ಬಿಚ್ಚಿಟ್ಟಿತ್ತು. ಈತನ ಕಾಮುಕ ಕೃತ್ಯಗಳು ಹಾಗೂ ವಂಚನೆ ಪ್ರಕರಣಗಳು 2005ರಿಂದಲೇ ನಡೆಯುತ್ತಿದ್ದರೂ, ಎಲ್ಲೂ ಬೆಳಕಿಗೆ ಬಂದಿರಲಿಲ್ಲ. ಆದರೆ, 2009ರಲ್ಲಿ ಬರಿಮಾರು ನಿವಾಸಿ ಅನಿತಾ ನಾಪತ್ತೆ ಮೂಲಕ ಅಷ್ಟೂ ಪ್ರಕರಣಗಳು ಬಯಲಿಗೆ ಬಂದವು.
ಇದೇ ವೇಳೆ ಹಲವು ಯುವತಿಯರ ನಾಪತ್ತೆ ಪ್ರಕರಣ ರಾಜಕೀಯ ದುರುದ್ದೇಶದ ಕೆಲವು ಸಂಘಟಕರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಪ್ರತಿಭಟನೆ ನಡೆಸಲು ಕಾರಣವೊಂದನ್ನು ಒದಗಿಸಿಕೊಟ್ಟಿತ್ತು. ಮೋಹನ್ ಬಿ.ಸಿ. ರೋಡ್ ನಿಂದ ಅನಿತಾಳನ್ನು ಹಾಸನಕ್ಕೆ ಕರೆದೊಯ್ದು, ಅತ್ಯಾಚಾರ ನಡೆಸಿ ಮರುದಿನ ಸೈನೈಡ್ ನೀಡಿ ಹತ್ಯೆ ಮಾಡಿದ್ದ.
ಆಕೆಯ ಮೊಬೈಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೋಹನನ ಒಟ್ಟು 20 ಯುವತಿಯರ ಸರಣಿ ಹತ್ಯೆ ಕಥಾನಕ ಬೆಚ್ಚಿಬೀಳುವಂತೆ ಮಾಡಿತ್ತು.