Home ಟಾಪ್ ಸುದ್ದಿಗಳು ‘ಲವ್ ಜಿಹಾದ್’ ಕಾನೂನಿನಡಿ ಕೇಸ್ ದಾಖಲಾಗಿದ್ದರೂ, ಯುವಕನ ಬಂಧಿಸದಂತೆ ಹೈಕೋರ್ಟ್ ತಡೆ | ಬಿಜೆಪಿ ಸರಕಾರದ...

‘ಲವ್ ಜಿಹಾದ್’ ಕಾನೂನಿನಡಿ ಕೇಸ್ ದಾಖಲಾಗಿದ್ದರೂ, ಯುವಕನ ಬಂಧಿಸದಂತೆ ಹೈಕೋರ್ಟ್ ತಡೆ | ಬಿಜೆಪಿ ಸರಕಾರದ ಹೊಸ ಕಾನೂನಿಗೆ ಮತ್ತೊಮ್ಮೆ ಹಿನ್ನಡೆ

ಲಖನೌ : ಉತ್ತರ ಪ್ರದೇಶದ ಇಬ್ಬರು ಮುಸ್ಲಿಂ ಸಹೋದರರ ವಿರುದ್ಧ ವಿವಾದಿತ ‘ಲವ್ ಜಿಹಾದ್’ ಕುಖ್ಯಾತಿಯ ಮತಾಂತರ ತಡೆ ಕಾನೂನಿ ಮೂಲಕ ಪ್ರಕರಣ ದಾಖಲಾಗಿದ್ದರೂ, ಅವರನ್ನು ಬಂಧಿಸುವುದಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಮುಝಾಫರ್ ನಗರದ ಅಕ್ಷಯ್ ಕುಮಾರ್ ತ್ಯಾಗಿ ಎಂಬಾತ ನದೀಮ್ ಮತ್ತು ಆತನ ಸಹೋದರ ಸಲ್ಮಾನ್ ವಿರುದ್ಧ ಕಳೆದ ತಿಂಗಳು ದೂರು ದಾಖಲಿಸಿದ್ದ. ನದೀಂ ಮುಝಾಫರ್ ನಗರದ ತನ್ನ ಮನೆಗೆ ದಿನ ನಿತ್ಯ ಬಂದು, ತನ್ನ ಪತ್ನಿ ಪಾರುಲ್ ಳನ್ನು ಮತಾಂತರಿಸುವ ಉದ್ದೇಶದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದಾನೆ. ಆಕೆಯನ್ನು ತನ್ನತ್ತ ಸೆಳೆಯಲು ಆತ ಆಕೆಗೆ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ಕೊಟ್ಟಿದ್ದಾನೆ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಅಕ್ಷಯ್ ಕುಮಾರ್ ಆರೋಪಿಸಿದ್ದ.

ಈ ಪ್ರಕರಣದ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ನದೀಂ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುಂದಿನ ವಿಚಾರಣೆಯ ವರೆಗೆ ನದೀಂನನ್ನು ಬಂಧಿಸದಂತೆ ಮತ್ತು ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ.

ಯಾವುದೇ ಬಲವಂತದ ಅಥವಾ ಆಮಿಷಕ್ಕೊಳಪಡಿಸಿದ ಪ್ರಕ್ರಿಯೆಯ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ ಹೇಳಿದೆ.

ಸಂತ್ರಸ್ತೆಯು ತನ್ನ ಏಳಿಗೆಯ ಬಗ್ಗೆ ಅರ್ಥ ಮಾಡಿಕೊಳ್ಳಬಲ್ಲ ವಯಸ್ಕಳಾಗಿದ್ದಾಳೆ. ಆಕೆ ಮತ್ತು ಅರ್ಜಿದಾರರಿಬ್ಬರೂ, ತಮ್ಮ ಸಂಬಂಧದಿಂದಾಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವುಹೊಂದಿರುವ ವಯಸ್ಕರು ಮತ್ತು ಅವರು ತಮ್ಮ ಖಾಸಗಿತನದ ಮೂಲಭೂತ ಹಕ್ಕು ಹೊಂದಿದ್ದಾರೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

‘ಲವ್ ಜಿಹಾದ್’ ಹೆಸರಲ್ಲಿ ಕಳೆದ ಹಲವು ವರ್ಷಗಳಿಂದ ಬಿಜೆಪಿಗರು ಪ್ರತಿಪಾದಿಸಿಕೊಂಡು ಬಂದಿದ್ದ ಅಪಪ್ರಚಾರಗಳನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ತನ್ನ ಬೆಂಬಲಿಗರನ್ನು ಓಲೈಸಲು ಮತ್ತು ಸಮಾಧಾನ ಪಡಿಸಲು, ಬಲವಂತದ ಮತಾಂತರ ತಡೆ ಕಾಯ್ದೆಯನ್ನು ತಂದಿದೆ. ಬಲವಂತದ ಮತಾಂತರ ತಡೆ ಕಾಯ್ದೆ ಈ ಹಿಂದೆಯೇ ಇದ್ದರೂ, ಅದಕ್ಕೆ ಒಂದಷ್ಟು ತಿದ್ದುಪಡಿಗಳನ್ನು ತಂದು, ಹೊಸ ಕಾನೂನು ತಂದಿರುವುದಾಗಿ ಬಿಂಬಿಸುವ ಮೂಲಕ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ತನ್ನ ಬೆಂಬಲಿಗರನ್ನು ಸಮಾಧಾನ ಪಡಿಸುವ ಪ್ರಕ್ರಿಯೆಯಲ್ಲಿ ನಿರತವಾಗಿವೆ. ಆದರೆ, ದೇಶಾದ್ಯಂತ ಬಿಜೆಪಿಯ ಇಬ್ಬಂದಿತನದ ಈ ಕಾನೂನಿನ ಬಗ್ಗೆ ನಾಗರಿಕ ಸಮಾಜದಲ್ಲಿ ಆಕ್ಷೇಪ ವ್ಯಕ್ತವಾಗಿದೆ.       

Join Whatsapp
Exit mobile version