Home ಟಾಪ್ ಸುದ್ದಿಗಳು ಮಸೀದಿಗಳಲ್ಲಿ ಧ್ವನಿವರ್ಧಕ ಪ್ರಕರಣ: ರಾಜ್ಯ ಸರ್ಕಾರ, ಪೊಲೀಸರು ಅಭಿಯಾನ ನಡೆಸಬೇಕು ಎಂದ ಹೈಕೋರ್ಟ್‌

ಮಸೀದಿಗಳಲ್ಲಿ ಧ್ವನಿವರ್ಧಕ ಪ್ರಕರಣ: ರಾಜ್ಯ ಸರ್ಕಾರ, ಪೊಲೀಸರು ಅಭಿಯಾನ ನಡೆಸಬೇಕು ಎಂದ ಹೈಕೋರ್ಟ್‌

ಬೆಂಗಳೂರು: ಧಾರ್ಮಿಕ ಸ್ಥಳಗಳು, ಪಬ್ಸ್‌, ರೆಸ್ಟೋರೆಂಟ್‌ ಮತ್ತಿತರ ಕಡೆ ಧ್ವನಿವರ್ಧಕ, ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನದ ದುರ್ಬಳಕೆ ಮಾಡದಂತೆ ತಡೆಯಲು ರಾಜ್ಯ ಸರ್ಕಾರ ಮತ್ತು ಪೊಲೀಸರು ಅಭಿಯಾನ ನಡೆಸಬೇಕು. ಈ ಸಂಬಂಧ ಕ್ರಮಕೈಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಬೆಂಗಳೂರಿನ ಕೆಲವು ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ ರಾಕೇಶ್‌ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ಹಾಗೂ ಸಂಬಂಧಿತ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ. ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಶಾಶ್ವತ ಪರವಾನಗಿ ನೀಡಲಾಗಿಲ್ಲ. ಧ್ವನಿವರ್ಧಕ ಬಳಕೆಗೆ ಶಬ್ದ ಮಾಲಿನ್ಯ (ಸುಧಾರಣೆ ನಿಯಂತ್ರಣ) 2000ರ ನಿಯಮ 5 ಜೊತೆಗೆ ಕರ್ನಾಟಕ ಪೊಲೀಸ್‌ ಕಾಯಿದೆಯ 1963ರ ಸೆಕ್ಷನ್‌ 37ರ ಅಡಿ ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ವರೆಗೆ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆ ಅನುಮತಿ ನೀಡಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ. ವಿಶೇಷವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಸಂದರ್ಭದಲ್ಲಿ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ 10ರಿಂದ 12ರವರೆಗೆ 15 ದಿನಗಳಿಗೆ ಮೀರದಂತೆ ಅನುಮತಿ ನೀಡಬಹುದಾಗಿದೆ. ಮಸೀದಿ, ಚರ್ಚ್‌, ಗುರುದ್ವಾರ, ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳು, ಪಬ್ಸ್‌, ರೆಸ್ಟೋರೆಂಟ್ಸ್‌ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಅನುಮತಿ ಇರುವ ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿ ಹೊಮ್ಮಿಸುವ ಧ್ವನಿವರ್ಧಕ, ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನ, ಶಬ್ದ ಒಮ್ಮಿಸುವ ಸಾಧನಗಳನ್ನು ರಾತ್ರಿ 10ರಿಂದ ಬೆಳಿಗ್ಗೆ 6ವರೆಗೆ ಬಳಸದಂತೆ ಸಂಬಂಧಿತ ಇಲಾಖೆಗಳು ಕ್ರಮಕೈಗೊಳ್ಳಬೇಕಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.


ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ವಕೀಲರು “ಶಬ್ದ ಮಾಲಿನ್ಯ ನಿಯಂತ್ರಣ ಕಾಯಿದೆ 2000ರ ನಿಯಮ 5, ಉಪ ನಿಯಮ 1ರ ಅಡಿ ಧ್ವನಿವರ್ಧಕ ಬಳಸಲು ಅನುಮತಿಸಲಾಗಿದೆ. ವರ್ಷದಲ್ಲಿ ಒಮ್ಮೆ 10 ಗಂಟೆಯ ನಂತರ 12 ಗಂಟೆವರೆಗೆ ಧ್ವನಿವರ್ಧಕ ಬಳಸಲು ಅನುಮತಿ ಇದ್ದು, ಅದು 15 ದಿನ ದಾಟುವಂತಿಲ್ಲ. ಬೆಳಗಿನ ಸಂದರ್ಭದಲ್ಲಿ ಶಬ್ದ, ಡೆಸಿಬಲ್‌ ಎಷ್ಟಿರಬೇಕು ಎಂಬುದರ ಕುರಿತು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ನಿಯಮ 2 ಮತ್ತು 3ರಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ 15 ದಿನ ದಾಟುವಂತಿಲ್ಲ ಎಂದು ಹೇಳಲಾಗಿದೆ. ರಾತ್ರಿ 10 ರಿಂದ 12 ಗಂಟೆವರೆಗೆ ಅನುಮತಿ ನೀಡಬಹುದಾಗಿದೆ ಎಂದು ನಿಯಮವಿದೆ. ಪರವಾನಗಿ ಪಡೆಯದೇ ಧ್ವನಿವರ್ಧಕಗಳ ಬಳಕೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈಚೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್‌ ಅಧಿಕಾರಿ, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯನ್ನು ಒಳಗೊಂಡ ಸಮಿತಿ ರಚಸಲಾಗುತ್ತದೆ. ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರೆ, ಈ ಸಮಿತಿ ಪರಿಶೀಲಿಸಿ ಆದೇಶ ಮಾಡುತ್ತದೆ. ಪಾಲಿಕೆ ಇಲ್ಲದ ಕಡೆ ಉಪ ಪೊಲೀಸ್‌ ವರಿಷ್ಠಾಧಿಕಾರಿ, ತಹಶೀಲ್ದಾರ್‌ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರನ್ನು ಒಳಗೊಂಡ ಸಮಿತಿ ನಿರ್ಧಾರ ಮಾಡಲಿದೆ” ಎಂದರು.

“ಧ್ವನಿವರ್ಧಕ ಬಳಕೆಗೆ ಶಾಶ್ವತ ಪರವಾನಗಿಯನ್ನು ಸರ್ಕಾರ ನೀಡುತ್ತಿಲ್ಲ. ಎರಡು ವರ್ಷಗಳಿಗೆ ಅನುಮತಿ ನೀಡಲಾಗುತ್ತದೆ. ಬಳಿಕ ಅದನ್ನು ನವೀಕರಿಸಿಕೊಳ್ಳಬಹುದಾಗಿದೆ. ಬೆಳಿಗ್ಗೆ ಆರು ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಕಾನೂನುಬಾಹಿರ. ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡುತ್ತಿರುವವರು ಸ್ವಯಂಪ್ರೇರಿತವಾಗಿ ತೆರವು ಮಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರು ಅದನ್ನು ತೆರವುಗೊಳಿಸುತ್ತಾರೆ. 2022ರ ಏಪ್ರಿಲ್‌ 2ರಂದು ಸ್ಥಿತಿಗತಿ ವರದಿ ಸಲ್ಲಿಸಿದ್ದು, ಸರ್ಕಾರವು ಕ್ರಮಕೈಗೊಂಡಿದೆ. ಬಾರ್‌, ಕಾರ್ಖಾನೆ ಎಲ್ಲೆಲ್ಲಿ ಕಾನೂನುಬಾಹಿರವಾಗಿ ಧ್ವನಿವರ್ಧಕ ಬಳಸಲಾಗುತ್ತಿದೆಯೋ ಅಲ್ಲೆಲ್ಲಾ ಕ್ರಮಕೈಗೊಳ್ಳಲಾಗಿದೆ” ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಭು ಅವರು “ಒಂದು ಕಡೆ ಬೆಳಿಗ್ಗೆ 6 ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಬಳಕೆಗೆ ಅನುಮತಿ ಇಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ವಕ್ಫ್‌ ಮಂಡಳಿಯು ಹೊರಡಿಸಿರುವ ಸುತ್ತೋಲೆ ಉಲ್ಲೇಖಿಸಿ 2021ರ ಜುಲೈ 1ರಂದು ಮಸೀದಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇಲ್ಲಿ ಪರವಾನಗಿಯನ್ನು ಒಂದು ಅಥವಾ ಎರಡು ವರ್ಷಕ್ಕೆ ನೀಡಲಾಗುತ್ತದೆ ಎಂಬುದನ್ನು ಹೇಳಿಲ್ಲ. ಇದು ಶಾಶ್ವತ ಪರವಾನಗಿಯಾಗಿದೆ. ಅಲ್ಲದೇ, ವಕ್ಫ್‌ ಮಂಡಳಿ ಹೊರಡಿಸಿರುವ ಸುತ್ತೋಲೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸಬಹುದು ಎಂದು ಹೇಳಲಾಗಿದೆ. ಆಜಾನ್‌ ಅಷ್ಟೇ ಅಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲೂ ಧ್ವನಿವರ್ಧಕ ಬಳಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ನಾವು ಯಾರ ವಿರುದ್ಧವೂ ಇಲ್ಲ” ಎಂದರು.

ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಧ್ವನಿವರ್ಧಕ ಬಳಕೆಗೆ ಎರಡು ವರ್ಷಗಳ ಪರವಾನಗಿ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ. ಅದನ್ನು ನವೀಕರಿಸಿಕೊಳ್ಳಬಹುದೇ? ಧಾರ್ಮಿಕ ಸಮಾರಂಭ, ಹಬ್ಬ, ಸೀಮಿತ ಸಂದರ್ಭದಲ್ಲಿ ರಾತ್ರಿ 10ರಿಂದ 12ರವರೆಗೆ ಧ್ವನಿವರ್ಧಕ ಬಳಸಲು ಅನುಮತಿಸಲಾಗಿದೆ. ಇದರರ್ಥ ಈ ಸಂದರ್ಭ ಹೊರತುಪಡಿಸಿ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಹಾಗಾದರೆ ರಾತ್ರಿ ಎಂದರೆ ಏನರ್ಥ? ಯಾವಾಗಿನಿಂದ ಯಾವಾಗ? ಸೂರ್ಯ ಮುಳುಗಿದ ಬಳಿಕದ ಸಮಯವನ್ನು ರಾತ್ರಿ ಎಂದು ಪರಿಗಣಿಸಬೇಕೆ? ಹಾಗಾದರೆ ಬೆಳಿಗ್ಗೆ 6 ಗಂಟೆಗೂ ಮುಂಚೆ ಧ್ವನಿವರ್ಧಕ ಬಳಸಿದರೆ ಅದು ತಪ್ಪಲ್ಲವೇ? ಸರ್ಕಾರದ ನಿಲುವಿನ ಪ್ರಕಾರ ಬೆಳಿಗ್ಗೆ 6 ಗಂಟೆಗೂ ಮುಂಚಿತವಾಗಿ ಸಂಬಂಧಪಟ್ಟವರಿಂದ ಲಿಖಿತ ಅನುಮತಿ ಪಡೆಯದೇ ಧ್ವನಿವರ್ಧಕ ಬಳಸುವಂತಿಲ್ಲ” ಎಂದರು.
“ಬೆಳಿಗ್ಗೆ ಆರು ಗಂಟೆಗೂ ಮುಂಚಿತವಾಗಿ ಆಜಾನ್‌ ಕೂಗಲು ಧ್ವನಿವರ್ಧಕವನ್ನು ಕಾನೂನುಬಾಹಿರವಾಗಿ ಬಳಸಲಾಗುತ್ತಿದೆಯೇ? ಕಾನೂನುಬಾಹಿರವಾಗಿ ಧ್ವನಿವರ್ಧಕ ಬಳಸುವುದನ್ನು ತಡೆಯಲು ಯಾವ ಕ್ರಮಕೈಗೊಳ್ಳಲಾಗಿದೆ. ನಮಗೆ ಏನೂ ಗೊತ್ತಿಲ್ಲ. ನಿಮ್ಮ (ಸರ್ಕಾರದ ವಕೀಲ) ವಾದವನ್ನು ಆಲಿಸಿ ನಾವು ತೀರ್ಮಾನ ಮಾಡುತ್ತಿದ್ದೇವೆ. ಸರ್ಕಾರದ ನಿಯಮ ಮತ್ತು ಸುತ್ತೋಲೆಯ ಪ್ರಕಾರ ಬೆಳಿಗ್ಗೆ 6ಕ್ಕೂ ಮುಂಚೆ ಧ್ವನಿವರ್ಧಕ ಬಳಸುವಂತಿಲ್ಲ. ಅದಾಗ್ಯೂ ಬಳಿಸಿದರೆ ಅದು ಅಕ್ರಮ. ಯಾವೆಲ್ಲಾ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಸಲಾಗುತ್ತದೆ, ಏನು ಕ್ರಮಕೈಗೊಳ್ಳಲಾಗಿದೆ ಅದನ್ನು ತಿಳಿಯಬೇಕಿದೆ” ಎಂದು ಹೇಳಿದರು.

“ಸರ್ಕಾರವು ಪರವಾನಗಿ ನೀಡಿರುವ ಕಡೆ ಕಾನೂನಿನ ಅನ್ವಯ ಧ್ವನಿವರ್ಧಕ ಬಳಸಲಾಗುತ್ತಿದೆಯೇ ಎಂಬುದಕ್ಕೆ ಅಭಿಯಾನ ನಡೆಸಿ. ಬಳಿಕ ಸ್ಥಿತಿಗತಿ ವರದಿ ಸಲ್ಲಿಸಿ. ಇಂದು ಕೈಗೊಂಡಿರುವ ನಿಲುವಿನ ಪ್ರಕಾರ ಸಮೀಕ್ಷೆ ನಡೆಸಿ, ಆಂದೋಲನ ಮಾಡಿ, ಅನುಪಾಲನಾ ವರದಿ ಸಲ್ಲಿಸಬೇಕು” ಎಂದರು.

ಕಳೆದ ವಿಚಾರಣೆಯಲ್ಲಿ ಕಾನೂನಿನ ಯಾವ ನಿಬಂಧನೆಯಡಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಅನುಮತಿಸಲಾಗಿದೆ ಮತ್ತು ಅದಕ್ಕೆ ಪರವಾನಗಿ ನೀಡುವ ಪ್ರಾಧಿಕಾರ ಯಾವುದು, ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು. ಅಂತಿಮವಾಗಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.


( ಕೃಪೆ: ಬಾರ್ ಆಂಡ್ ಬೆಂಚ್)

Join Whatsapp
Exit mobile version