Home ಕ್ರೀಡೆ ವಿಶ್ವದಾಖಲೆ | ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲಿಸಿದ ಇಂಗ್ಲೆಂಡ್

ವಿಶ್ವದಾಖಲೆ | ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲಿಸಿದ ಇಂಗ್ಲೆಂಡ್

ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲೇ ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ಮೊತ್ತ ದಾಖಲಿಸುವ ಮೂಲಕ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶ್ವದಾಖಲೆ ನಿರ್ಮಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್, ಬರೊಬ್ಬರಿ 498 ರನ್‌ಗಳನ್ನು ದಾಖಲಿಸಿ  ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಈ ವಿಭಾಗದ ದಾಖಲೆಯ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲೂ ಇಂಗ್ಲೆಂಡ್ ತಂಡದ ಹೆಸರು ದಾಖಲಾಗಿದೆ. 

ಟಾಸ್ ಸೋತು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಫಿಲ್ ಸಾಲ್ಟ್ 122 ರನ್ , ಡೇವಿಡ್ ಮಲಾನ್ 125 ರನ್ ಹಾಗೂ ಜಾಸ್ ಬಟ್ಲರ್ 162 ರನ್, ಅಮೋಘ ಶತಕಗಳ ಮೂಲಕ ಅಬ್ಬರಿಸಿದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್ಸ್‌ಸ್ಟನ್‌ ಕೇವಲ 22 ಎಸೆತಗಳಲ್ಲಿ ತಲಾ 6 ಸಿಕ್ಸರ್ ಮತ್ತು ಬೌಂಡರಿಗಳನ್ನೊಳಗೊಂಡ 66 ರನ್ ಸಿಡಿಸಿದರು. ಹಿಗ್ಗಾಮುಗ್ಗಾ ಚಚ್ಚಿಸಿಕೊಂಡ ನೆದರ್ಲೆಂಡ್ಸ್ ಬೌಲರ್‌ಗಳು 14 ವೈಡ್ ಸೇರಿದಂತೆ 22 ರನ್‌ಗಳನ್ನು ಇತರೆ ರೂಪದಲ್ಲಿ ದಾನವಾಗಿ ನೀಡಿ ಮತ್ತಷ್ಟು ದುಬಾರಿಯಾದರು. 

42 ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಮೂಲಕ ಕೇವಲ 47 ಎಸೆತಗಳಲ್ಲಿ ಭರ್ಜರಿ ಶತಕ ದಾಖಲಿಸಿದ ಜಾಸ್ ಬಟ್ಲರ್ ಒಟ್ಟು 70 ಎಸೆತಗಳಲ್ಲಿ 14 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 162 ರನ್‌ಗಳಿಸಿ ಅಜೇಯರಾಗುಳಿದರು. ಫಿಲ್ ಸಾಲ್ಟ್ 122 ( 93 ಎಸೆತ, 6×3, 4×14), ಡೇವಿಡ್ ಮಲಾನ್ 125 ರನ್ ( 109 ಎಸೆತ, 6×3, 4×9) ಕೊಡುಗೆ ನೀಡಿದರು. 

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಈ ಹಿಂದೆಯೂ ಇಂಗ್ಲೆಂಡ್ ತಂಡದ ಹೆಸರಿನಲ್ಲಿಯೇ ಇತ್ತು. 2018, ಜೂನ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 6 ವಿಕೆಟ್ ನಷ್ಟದಲ್ಲಿ 481 ರನ್‌ಗಳಿಸಿದ್ದು ಇದುವರೆಗಿನ ಅತಿಹೆಚ್ಚು ಮೊತ್ತದ ದಾಖಲೆಯಾಗಿತ್ತು. ಇದೀಗ ತನ್ನ ದಾಖಲೆಯನ್ನು  ಇಂಗ್ಲೆಂಡ್ ಮತ್ತಷ್ಟು ಉತ್ತಮಪಡಿಸಿಕೊಂಡಿದೆ. ವಿಶೇಷವೆಂದರೆ ಈ ಪಟ್ಟಿಯ ಮೂರನೇ ಸ್ಥಾನದಲ್ಲೂ ಇಂಗ್ಲೆಂಡ್ ತಂಡವೇ ಇದೆ. 2016ರ ಆಗಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಂಗ್ಲ ಪಡೆ 3 ವಿಕೆಟ್ ನಷ್ಟದಲ್ಲಿ 444 ರನ್‌ ಕಲೆಹಾಕಿತ್ತು. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾ 443/9 (ನೆದರ್ಲೆಂಡ್ಸ್ ವಿರುದ್ಧ 2006) ಮತ್ತು ದಕ್ಷಿಣ ಆಫ್ರಿಕ 439/2 (ವೆಸ್ ಇಂಡೀಸ್ ವಿರುದ್ಧ, 2015) ಐದನೇ ಸ್ಥಾನದಲ್ಲಿದೆ

Join Whatsapp
Exit mobile version