Home ಟಾಪ್ ಸುದ್ದಿಗಳು ಪ್ರಶಾಂತ್ ಮಾಡಾಳ್ ಬಂಧನ ಬೆನ್ನಲ್ಲೇ ಕೆಎಸ್’ಡಿಎಲ್ ಎಂ.ಡಿ.ಮನೆ ಮೇಲೆ ಲೋಕಾಯುಕ್ತ ದಾಳಿ

ಪ್ರಶಾಂತ್ ಮಾಡಾಳ್ ಬಂಧನ ಬೆನ್ನಲ್ಲೇ ಕೆಎಸ್’ಡಿಎಲ್ ಎಂ.ಡಿ.ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಬೆಂಗಳೂರು ಜಲಮಂಡಳಿಯ (ಬಿಡ್ಲೂಎಸ್’ಎಸ್’ಬಿ) ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಬಳಿ ಕೋಟಿಗಟ್ಟಲೆ ಹಣ ಪತ್ತೆಯಾಗಿದ್ದು ಆಡಳಿತ ಪಕ್ಷ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದೆ.


ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್’ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ನೀಡಲು 40 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಪ್ರಶಾಂತ್ ಮಾಡಾಳ್ ಅವರನ್ನು ನಿನ್ನೆ ರಾತ್ರಿ ಮಿಂಚಿನ ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಪ್ರಶಾಂತ್ ಮನೆ ಹಾಗೂ ಕಚೇರಿಯಲ್ಲಿ ಪತ್ತೆಯಾಗಿರುವ 7.62 ಕೋಟಿ ರೂಗಳು ಜಪ್ತಿ ಮಾಡಿದ್ದಾರೆ.
ಸಂಜಯನಗರದ ಕೆಎಂವಿ ಮ್ಯಾನ್ಷನ್ ಅಪಾರ್ಟ್’ಮೆಂಟ್’ನಲ್ಲಿರುವ ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ನಿವಾಸದಲ್ಲಿ ಒಟ್ಟು 6 ಕೋಟಿ ರೂ ನಗದು ಹಣ ಪತ್ತೆಯಾಗಿದೆ.


ಒಟ್ಟು ಎಂಟು ಫ್ಲ್ಯಾಟ್’ಗಳನ್ನು ಹೊಂದಿರುವ ಅಪಾರ್ಟ್ಮೆಂಟ್’ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇನ್ನು ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಕಚೇರಿಯಲ್ಲಿ 1.62 ಕೋಟಿ ರೂ ನಗದು ಜಪ್ತಿಯಾಗಿದ್ದು, ಬಿಜೆಪಿ ಶಾಸಕ ಪುತ್ರನ ಮನೆ-ಕಚೇರಿಯಲ್ಲಿ ಕೈ ಇಟ್ಟಲೆಲ್ಲ ಕಂತೆ ಕಂತೆ ಹಣ ಪತ್ತೆಯಾಗಿದ್ದು ಅಧಿಕಾರಿಗಳೇ ದಂಗಾಗಿದ್ದಾರೆ. ಕ್ರೆಸೆಂಟ್ ರಸ್ತೆಯ ಅವರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಗಿನ ಜಾವ 4 ಗಂಟೆವರೆಗೂ ಶೋಧ ನಡೆಸಿರುವ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಅವರ ಸಂಬಂಧಿ ಸಿದ್ದೇಶ್, ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್ (ದುಡ್ಡು ಕೊಡಲು ಬಂದವನು)ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ರಾತ್ರಿಯಿಂದ ಸುಮಾರು 9 ಗಂಟೆ 30 ನಿಮಿಷಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಸಂಜಯನಗರ ಬಳಿ ಇರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒಡೆತನದ ಕೆ.ಎಂ.ವಿ ಮಾನ್ಷಿಯನ್ ನಿವಾಸದಲ್ಲಿ ಡಿವೈ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.


ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್’ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಮಾಡಾಳ್ ಪ್ರಶಾಂತ್ ಕಚೇರಿ ಕಲೆಕ್ಷನ್ ಸೆಂಟರ್ ಆಗಿರುವ ಶಂಕೆ ವ್ಯಕ್ತವಾಗಿದೆ.


ಹಣದ ಬ್ಯಾಗ್’ಗಳು ಪತ್ತೆ:
2008ರಲ್ಲಿ ತಂದೆ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿ ಕೆಎಎಸ್’ನಲ್ಲಿ ತೇರ್ಗಡೆ ಆಗಿದ್ದ ಮಾಡಾಳ್ ಪ್ರಶಾಂತ್ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ. ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು, ಈ ಪೈಕಿ ಪ್ರಶಾಂತ್ ಎರಡನೇ ಪುತ್ರ. ಈ ಹಿಂದೆ ನಡೆದಿರುವ ಕೆಎಸ್’ಡಿಎಲ್’ನ ಟೆಂಡರನಲ್ಲೂ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಕಚೇರಿಯಲ್ಲಿರುವ ಎಲ್ಲ ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ದಾಖಲೆ ಪತ್ರ ವಶಕ್ಕೆ:
ಜೊತೆಗೆ ಅಪಾರ ಪ್ರಮಾಣದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ಎಲ್ಲಾ ದಾಖಲೆಗಳನ್ನು ಪೆನ್ ಡ್ರೈವ್’ನಲ್ಲಿ ಕಾಪಿ ಮಾಡಿಕೊಂಡಿದ್ದಾರೆ.
ಬಂಧಿತ ಪ್ರಶಾಂತ್ ಮಾಡಾಳ್ ಹಾಗೂ ಅವರ ಸಂಬಂಧಿ ಸಿದ್ದೇಶ್, ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್(ದುಡ್ಡು ಕೊಡಲು ಬಂದವನು)ನನ್ನು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರು ಪಡೆಸಿ ಅರೋಪಿಗಳ ವಶಕ್ಕೆ ಪಡೆಯಲಿದ್ದಾರೆ.


ಎಂಡಿ ಮನೆ ಮೇಲೆ ದಾಳಿ:
ಕೆಎಸ್’ಡಿಎಲ್ ಅಧ್ಯಕ್ಷ ಮತ್ತು ಪುತ್ರನ ಮನೆ ಮೇಲೆ ದಾಳಿ ಬೆನ್ನಲ್ಲೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಗರದ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದಾಳಿ ಮಾಡಿದ್ದಾರೆ. ಇನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ಶಾಸಕರ ಮನೆ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿಮಾಡುವ ಸಾದ್ಯತೆ ಇದೆ.


ವಿರೂಪಾಕ್ಷಪ್ಪ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನೂ ಮೂರು ಕಂಪನಿಗಳು ಈ ಟೆಂಡರ್ ಪಡೆಯಲು 40 ಲಕ್ಷ ಹಣ ತೆಗೆದುಕೊಂಡು ಬಂದಿರುವುದು ಪತ್ತೆಯಾಗಿತ್ತು. ಹಣವನ್ನು ಖಾಸಗಿ ಕಚೇರಿಗೆ ತಂದು ಕೊಡುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ ಎಲ್ಲರೂ ಹಣ ನೀಡಲು ಖಾಸಗಿ ಕಚೇರಿಯಾದ ಎಂ ಸ್ಟುಡಿಯೋಗೆ ಲಕ್ಷ ಲಕ್ಷ ಹಣ ತಂದಿದ್ದರು. ಹೀಗೆ ತಂದಿರುವ ಒಟ್ಟು 1 ಕೋಟಿ 62 ಲಕ್ಷ ರೂಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಂದೆ ವಿರೂಪಾಕ್ಷಪ್ಪ ಅವರ ಪರವಾಗಿ ಮಗ ಮಾಡಾಳ್ ಪ್ರಶಾಂತ್ ಹಣ ಪಡೆಯಲು ಬಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version