ನವದೆಹಲಿ: ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮೊದಲ ಯತ್ನದಲ್ಲೇ ಯುಪಿಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ.
2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅಂಜಲಿ ಬಿರ್ಲಾ, ಪ್ರಸ್ತುತ ರೈಲ್ವೆ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಓಂ ಬಿರ್ಲಾ-ಅಮೃತಾ ಬಿರ್ಲಾ ದಂಪತಿಗೆ ಆಕಾಂಕ್ಷಾ ಮತ್ತು ಅಂಜಲಿ ಬಿರ್ಲಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಕಿರಿಯ ಪುತ್ರಿಯಾಗಿರುವ ಅಂಜಲಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಕೋಟಾದ ಸೋಫಿಯಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಅಂಜಲಿ ನಂತರ ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರುವ ರಾಮ್ಜಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾದ ಅಂಜಲಿ ತಮ್ಮ ಮೊದಲ ಯತ್ನದಲ್ಲೇ ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂಬ ಹೆಗ್ಗಳಿಕೆ ಗಳಿಸಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಪಾಸಾಗಿದ್ದಾರೆ.
ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದಕ್ಕೆ ನನಗೆ ಬಹಳ ಖುಷಿ ಇದೆ. ನನ್ನ ತಂದೆ ಈ ದೇಶದ ಜನರಿಗಾಗಿ ಸಮರ್ಪಿತರಾಗಿದ್ದಾರೆ ಅವರಿಂದಲೇ ಸಮಾಜಕ್ಕೆ ಏನನ್ನಾದರು ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದೆ ಎಂದು ಹೇಳಿಕೊಂಡಿದ್ದಾರೆ.
2020ರ ಆಗಸ್ಟ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಯುಪಿಎಸ್‌ಸಿ ಮೀಸಲು ಪಟ್ಟಿಯನ್ನು ತಯಾರಿಸಿತ್ತು. ಇದರಲ್ಲಿ ಅಂಜಲಿ ಬಿರ್ಲಾ ಹೆಸರಿತ್ತು. ಸಾಮಾನ್ಯ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು 89 ಅಭ್ಯರ್ಥಿಗಳ ಹೆಸರು ಆ ಲಿಸ್ಟ್‌ನಲ್ಲಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೇಳಿಕೆ ಪ್ರಕಾರ, ಕಮೀಷನ್ ನಾಗರಿಕ ಸೇವೆಗಳ ಪರೀಕ್ಷಾ ನಿಯಮಗಳ ನಿಯಮ 16 (4) ಮತ್ತು (5) ರ ಪ್ರಕಾರ ಆಯಾ ವರ್ಗಗಳ ಅಡಿಯಲ್ಲಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸುತ್ತದೆ.