Home ಟಾಪ್ ಸುದ್ದಿಗಳು ಬಕ್ರೀದ್‌ಗೆ ಲಾಕ್‌ಡೌನ್ ಸಡಿಲಿಕೆ| ಕೇರಳ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಬಕ್ರೀದ್‌ಗೆ ಲಾಕ್‌ಡೌನ್ ಸಡಿಲಿಕೆ| ಕೇರಳ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಬಕ್ರೀದ್ ಗೆ ನೀಡಲಾಗಿರುವ ಲಾಕ್‌ಡೌನ್ ಸಡಿಲಿಕೆಯ ಕುರಿತು ಇಂದು ವಿವರಣೆ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಬಕ್ರೀದ್ಗೆ ದೊಡ್ಡ ಪ್ರಮಾಣದ ಲಾಕ್ ಡೌನ್ ಸಡಿಲಿಕೆ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಈ ವೇಳೆ ತಿಳಿಸಿದರು. ಬಕ್ರೀದ್ಗೆ ಮೂರು ದಿನಗಳ ಲಾಕ್‌ಡೌನ್ ಸಡಿಲಿಕೆಯನ್ನು ನೀಡಿರುವ ಕೇರಳ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಮೂಲದ ಮಲಯಾಳಿ ಪಿಕೆಡಿ ನಂಬಿಯಾರ್ ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿದ್ದರು.

ಶೇಕಡಾ 2 ರಷ್ಟು ಟಿಪಿಆರ್ ಹೊಂದಿರುವ ಉತ್ತರಪ್ರದೇಶದಲ್ಲಿ ಕಾವಡಿ ಯಾತ್ರೆಯನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿರುವುದನ್ನು ನಂಬಿಯಾರ್ ಪರ ವಕೀಲ ವಿಕಾಸ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಕೇರಳದಲ್ಲಿ ಟಿಪಿಆರ್ ಪ್ರಮಾಣ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳ ಹೊರತಾಗಿಯೂ, ಕೇರಳವು ಬಕ್ರೀದ್ ಗೆ ಮೂರು ದಿನಗಳವರೆಗೆ ಸಡಿಲಿಕೆ ನೀಡಿದೆ ಎಂದು ಅರ್ಜಿದಾರನ ಪರ ವಕೀಲರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಪರ ವಕೀಲರಾದ ಜಿ.ಪ್ರಕಾಶ್ ಅವರು ಈ ಆರೋಪಗಳೆಲ್ಲಾ ಆಧಾರ ರಹಿತ. ಅಂಗಡಿ ತೆರೆಯಲು ಸರ್ಕಾರ ಈ ಹಿಂದೆಯೇ ಅನುಮತಿ ನೀಡಿತ್ತು. ಕೇಂದ್ರ ಸರ್ಕಾರ ನೀಡಿರುವ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಕೇರಳ ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಜನರ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲಿದೆ ಎಂದು ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ನ್ಯಾಯಪೀಠ ಸ್ಪಷ್ಟನೆ ನೀಡಿದೆ.

Join Whatsapp
Exit mobile version