Home ಟಾಪ್ ಸುದ್ದಿಗಳು ಕೇವಲ ಆಚರಣೆಯಾಗುತ್ತಿರುವ ಸಾಹಿತ್ಯ ಸಮ್ಮೇಳನಗಳು: ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ

ಕೇವಲ ಆಚರಣೆಯಾಗುತ್ತಿರುವ ಸಾಹಿತ್ಯ ಸಮ್ಮೇಳನಗಳು: ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ

ಬೆಂಗಳೂರು: ಒಂದು ಕಾಲದಲ್ಲಿ ಸಾಹಿತ್ಯ ಸಮ್ಮೇಳನ ಅನ್ನುವಂತಹದ್ದು, ಸಾಹಿತಿಗಳ ಸಮಾವೇಶವಾಗಿ ರೂಪುಗೊಳ್ಳುವುದನ್ನು ನಾವು ಕಾಣಬಹುದಾಗಿತ್ತು. ಆದರೆ ಪ್ರಸ್ತುತ ಸಾಹಿತ್ಯ ಸಮ್ಮೇಳನ ಕೇವಲ ಆಚರಣೆಯಾಗಿದೆ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಹಾಸನದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ʻಹೊಯ್ಸಳ ಸಾಹಿತ್ಯೋತ್ಸವ – 2022ʼರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಹಿಂದೆ ಸಾಹಿತ್ಯ ಸಮ್ಮೇಳನೆವೆಂದರೆ ಸಾಹಿತಿಗಳ ಸಮಾವೇಶವಾಗಿ ರೂಪುಗೊಳ್ಳುವುದನ್ನು ನನ್ನ ತಾರುಣ್ಯದ ದಿನಗಳಲ್ಲಿ ಕಂಡಿದ್ದೆ. ಆಗ ಸಾಹಿತ್ಯ ಸಮ್ಮೇಳನವೆಂದರೆ ಅವರ ಜೊತೆ ಮಾತು, ಅನುಭವಗಳನ್ನು ಹಂಚಿಕೊಳ್ಳುವುದು ಪ್ರಧಾನವಾಗಿತ್ತು. ಆದರೆ ಕ್ರಮೇಣ ಸಾಹಿತ್ಯ ಸಮ್ಮೇಳನ ಅನ್ನುವಂತದ್ದು ಉತ್ಸವದ ರೂಪವನ್ನು ತಾಳಿ ಸಾಹಿತಿಗಳಿಗಿಂತ ಸಾಹಿತ್ಯೇತರ ವ್ಯಕ್ತಿಗಳು ಅಲ್ಲಿ ವಿಜೃಂಭಿಸಲು ಶುರುಮಾಡಿದರು. ಅಷ್ಟೇ ಅಲ್ಲ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗಳ ಕುರಿತು ಚರ್ಚೆ ನಡೆಯುವುದಕ್ಕಿಂತ ಊಟದ ಕುರಿತೇ ಮಾಧ್ಯಮಗಳಲ್ಲಿ ಕಾಣಿಸುವುದನ್ನು ನಾನೇ ಗಮನಿಸಿದ್ದೇನೆ. ಇಂತಹ ಉತ್ಸಾಹ ಬೇಡವೆಂದಲ್ಲ. ಪು.ತಿ.ನಾ ಹೇಳುವ ಹಾಗೆ ಬದುಕನ್ನು ಕಲಿಯಲು ಉತ್ಸಾಹಬೇಕು. ಆದರೆ ಉತ್ಸಾಹಕ್ಕೆ ತಾತ್ವಿಕ ಬೆನ್ನೆಲುಬು ಇಲ್ಲದೆ ಹೋದರೆ ಅದು ಕೇವಲ ಆಚರಣೆ ಆಗಿ ಬಿಡುತ್ತದೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕವಿ ಸುಬ್ರಾಯ ಚೊಕ್ಕಾಡಿ ಅವರು, ಕಾರಂತರು ಹೇಳಿದ ಹಾಗೆ ಸಮಾರೋಪ ಮುಗಿದ ಹಾಗೆ ಎಲ್ಲವೂ ಮುಗಿಯುತ್ತದೆಯಾ ಎನ್ನುವುದು ನಾವು ಗಮನಿಸಬೇಕು. ಈ ಪ್ರಶ್ನೆಯನ್ನು ನಾವು ನಮಗೆ ಹಾಕಿಕೊಳ್ಳಬೇಕು. ಈ ಎರಡು ದಿನಗಳ ಕಾರ್ಯಕ್ರಮ ಮುಗಿಯಬಹುದು. ಆದರೆ ಸಮಾರೋಪದ ನಂತರ ನಡೆಯುವಂತಹ ಬೆಳವಣಿಗೆ ಮುಗಿಯಲು ಸಾಧ್ಯವಿಲ್ಲ ಎಂದರು. ಇವತ್ತಿನ ದಿನಗಳಲ್ಲಿ ಸಂವಾದಗಳು ನಡೆಯುತ್ತಿಲ್ಲ. ಕಾರ್ಯಕ್ರಮಗಳು ನಡೆದಾಗ ಮಾತ್ರ ಚರ್ಚೆಗೆ, ಸಂವಾದಕ್ಕೆ ಒಂದು ವೇದಿಕೆ ಸಿಗುತ್ತದೆ ಎಂದರು.

ಲೇಖಕ ಗಿರೀಶ್ ರಾವ್ ಹತ್ವಾರ್(ಜೋಗಿ) ಮಾತನಾಡಿ, ಜಗತ್ತು ನಮಗೆ ಎಲ್ಲವನ್ನೂ ಕೂಡ ಕೊಡುತ್ತದೆ. ಆದರೆ ಸಾಹಿತ್ಯ ಕುರಿತ ವಿಚಾರಗಳನ್ನು ತಿಳಿಸಲು ಇಂತಹ ಸಾಹಿತ್ಯೋತ್ಸವ ಕಾರ್ಯಕ್ರಮಗಳೇ ಆಗಬೇಕು. ಇನ್ನು ಇಲ್ಲಿ ನನಗೆ ಖುಷಿಯನ್ನು ನೀಡಿದ ವಿಚಾರವೆಂದರೆ ಒಬ್ಬ ಲೇಖಕನಿಗೆ ಪ್ರೀತಿ, ಗೌರವಕ್ಕಿಂತ ಮಿಗಿಲು ಯಾವುದಿಲ್ಲ. ಅಂತಹ ಪ್ರೀತಿ ಈ ಸಾಹಿತ್ಯೋತ್ಸವದಲ್ಲಿ ಸಿಕ್ಕಿದೆ ಎಂದರು.

ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ಇಂತಹ ಸಾಹಿತ್ಯೋತ್ಸವ ಹಾಸನದಲ್ಲಿ ಯಶಸ್ವಿಯಾಗಿ ನಡೆದಿದ್ದು ಬಹಳ ಸಂತೋಷವಾಯಿತು. ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರೂ ಕೂಡ ಯಶಸ್ವಿಗೆ ಕಾರಣಕರ್ತರೇ ಎಂದು ಅಭಿನಂದಿಸಿದರು.

ವಾಗ್ಮಿ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಎರಡು ದಿನಗಳ ಕಾಲ ನಡೆದ ಈ ಸಾಹಿತ್ಯೋತ್ಸವ ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಅತ್ಯಂತ ಸಂಭ್ರಮವನ್ನು ಉಂಟು ಮಾಡಿದೆ. ಇಂತಹ ಕಾರ್ಯಕ್ರಮಗಳು ಇದುವರೆಗೂ ನಡೆದಿಲ್ಲ. ಮುಂದೆ ಈ ತಂಡ ಇನ್ನಷ್ಟು ಸಂಭ್ರಮಗಳನ್ನು ಆಚರಿಸಲಿ ಎಂಬುದೇ ನನ್ನ ಆಶಯ ಎಂದರು.

ಲೇಖಕ ಶಿವಾನಂದ ತಗಡೂರು ಮಾತನಾಡಿ, ಒಂದು ಕಾರ್ಯಕ್ರಮ ಸಂಘಟನೆ ಮಾಡುವುದು ಅಷ್ಟು ಸುಲಭವಲ್ಲ. ಅಂಥದರಲ್ಲಿ ಇಂತಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿ, ಅದಕ್ಕೊಂದು ಸೊಗಸಾದ ರೂಪ ಕೊಟ್ಟು ಒಂದು ಲೋಪವೂ ಆಗದೇ ಇರುವ ರೀತಿಯಲ್ಲಿ ನಿಭಾಯಿಸುವುದು ಸುಲಭವಲ್ಲ. ಅಂತಹ ಕಾರ್ಯವನ್ನು ಹಾಸನ ಸಾಹಿತ್ಯೋತ್ಸವ ತಂಡ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಎಚ್.ಎಲ್. ಮಲ್ಲೇಶಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Join Whatsapp
Exit mobile version