ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಾನು ಭಾಗಿಯಾಗಿದ್ದೇನೆ ಎಂಬ ಮೋದಿಯವರ ಹೇಳಿಕೆಯು ಟ್ವಿಟ್ಟರ್ ನಲ್ಲಿ ಭಾರೀ ಟ್ರೋಲ್ ಗಳಿಗೆ ಒಳಗಾಗಿದ್ದು, #LieLikeModi ಎಂಬ ಹ್ಯಾಷ್ ಟ್ಯಾಗ್ ಭಾರೀ ಟ್ರೆಂಡ್ ಆಗಿದೆ.
50ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ “ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಬಾಂಗ್ಲಾದ ವಿಮೋಚನೆಗಾಗಿ ನಾನೂ ಹೋರಾಟ ನಡೆಸಿದ್ದೆ. ಬಾಂಗ್ಲಾದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನ ಪ್ರಯಾಣದ ಮಹತ್ವದ ಕ್ಷಣವಾಗಿತ್ತು. ನನ್ನ ಸಹೋದ್ಯೋಗಿಗಳೊಂದಿಗೆ ನಾನು ಭಾರತದಲ್ಲಿ ಮಾಡಿದ ಸತ್ಯಾಗ್ರಹದಿಂದಾಗಿ ಜೈಲಿಗೂ ಹೋಗಿದ್ದೆ” ಎಂದು ಮೋದಿ ಹೇಳಿದ್ದರು.
ಮೋದಿಯ ಈ ಹೇಳಿಕೆಯನ್ನು 2 ಲಕ್ಷಕ್ಕೂ ಹೆಚ್ಚು ಜನ #LieLikemodi ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ ಅಪಹಾಸ್ಯ ಮಾಡಿದ್ದಾರೆ. “ನರೇಂದ್ರ ಮೋದಿಯವರನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಜೈಲರ್ ನನ್ನು ಭಾರತವು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ” ಎಂದು ನೀರಜ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
“ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ತನ್ನ ಸಹೋದ್ಯೋಗಿಗಳೊಂದಿಗೆ ಹೋರಾಡುತ್ತಿರುವುದು” ಎಂದು ಎಡಿಟ್ ಮಾಡಿದ ಫೋಟೋವನ್ನು ರಾಜೇಶ್ ಕುಮಾರ್ ಎಂಬವರು ಹಂಚಿಕೊಂಡಿದ್ದಾರೆ.
ಅಮಿರ್ ಎಂಬುವವರು “ಅಲೆಕ್ಸಾಂಡರ್ ಗ್ರಹಾಂಬೆಲ್ ಟೆಲಿಫೋನ್ ಕಂಡುಹಿಡಿದ ಸಮಯದಲ್ಲಿ ಮೋದಿಯವರಿಂದ ಮೂರು ಮಿಸ್ಡ್ ಕಾಲ್‌ಗಳು ಬಂದಿದ್ದವು” ಎಂದು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
“ಕ್ರಿಸ್ಟೋಫರ್ ನೋಲನ್ ಅವರ ಮನಸ್ಸಿನಲ್ಲಿ ಇನ್ಸೆಪ್ಷನ್ ಕಲ್ಪನೆಯನ್ನು ಅಳವಡಿಸಿದವರು ಮೋದಿಜಿ. ಇದು ಮನ್ ಕಿ ಬಾತ್” ಎಂದು ಕಾಂಗ್ರೆಸ್ ವಕ್ತಾರರಾದ ಶ್ರೀವತ್ಸ ಟ್ವೀಟ್ ಮಾಡಿ ಮೋದಿಯ ಕಾಲೆಳೆದಿದ್ದಾರೆ.
ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮೋದಿಯವರನ್ನು ಅಪಹಾಸ್ಯ ಮಾಡಿರುವ ಇನ್ನೂ ಹಲವು ಟ್ವೀಟ್ ಗಳನ್ನು ಕಾಣಬಹುದು.