ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಗೆ ಅಪಮಾನ ಮಾಡಿರುವ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾಹಿತ್ಯ ವಲಯ ಮಾಡುತ್ತಿರುವ ಹೋರಾಟ ತೀವ್ರಗೊಂಡಿದ್ದು, ಮತ್ತೆ ಮೂವರು ಸಾಹಿತಿಗಳು ತಮ್ಮ ಪಠ್ಯವನ್ನು ವಾಪಸ್ ಪಡೆದಿದ್ದಾರೆ.
ಸಾಹಿತಿಗಳಾದ ಚಂದ್ರಶೇಖರ ತಾಳ್ಯ, ಈರಪ್ಪ ಎಂ. ಕಂಬಳಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಈ ಸಾಹಿತಿಗಳು ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈರಪ್ಪ ಕಂಬಳಿ ಅತ್ಯುತ್ತಮ ಅನುವಾದಕರಾಗಿದ್ದು, ಮೂರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರು ತಮ್ಮ ಪತ್ರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಗಳು ತಮಗೆ ಅತೀವ ನೋವುಂಟು ಮಾಡಿದೆ. ಹೀಗಾಗಿ ಕಳೆದ ಸಾಲಿನ ಹತ್ತನೇ ತರಗತಿಯ ನುಡಿ ಕನ್ನಡದ ತೃತೀಯ ಭಾಷಾ ಕನ್ನಡ ಪಠ್ಯ ಪುಸ್ತಕದಲ್ಲಿ “ಹಿಂಗೊಂದು ಟಾಪ್ ಪ್ರಯಾಣ” ಎಂಬ ತಮ್ಮ ಲಲಿತ ಪ್ರಬಂಧವನ್ನು ಮುಂದುವರೆಸಬಾರದು. ಈ ಹಿಂದೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಚಂದ್ರಶೇಖರ ತಾಳ್ಯ ತಮ್ಮ ಪತ್ರದಲ್ಲಿ, ಶಿಕ್ಷಣ ಕ್ಷೇತ್ರದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ದಾಳಿಯನ್ನು ಖಂಡಿಸಿದ್ದು, ಇಂತಹ ಕ್ರಮದಿಂದ ನಮ್ಮಂತಹ ಲೇಖಕರು ಅಧೀರರಾಗುವಂತೆ ಮಾಡಿದೆ. ಇದು ಕನ್ನಡ ಪರಂಪರೆಯನ್ನು ಕುಬ್ಜಗೊಳಿಸುವ ಅಕ್ರಮ ನಡೆಯಾಗಿದೆ. ಪಠ್ಯ ಪರಿಷ್ಕರಣೆಯ ನೆಪದಲ್ಲಿ ಸಂಸ್ಕೃತಿಯನ್ನೇ ವಿರೂಪಗೊಳಿಸುವ ಕೃತ್ಯ ಇದಾಗಿದೆ. ತಮ್ಮ 6 ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿದ್ದು, ಇದನ್ನು ಬೋಧಿಸುವ ಅನುಮತಿಯನ್ನು ವಾಪಸ್ ಪಡೆದಿದ್ದೇನೆ ಎಂದಿದ್ದಾರೆ.
ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಅವರು ತಮ್ಮ ಪತ್ರದಲ್ಲಿ 5 ನೇ ತರಗತಿ “ನನ್ನ ಕವಿತೆಗೆ” ಎಂಬ ಕವಿತೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.