ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಠ್ಯದ ಮೂಲಕ ವಿಷಪ್ರಾಶನ ಮಾಡಲು ಯೋಜನೆ ಹಾಕಿಕೊಂಡಿದೆ. ಚಕ್ರತೀರ್ಥ, ಸೂಲಿಬೆಲೆ, ಪ್ರತಾಪ್ ಸಿಂಹರಿಗೆ ಜಗತ್ತಿನ ಇತಿಹಾಸದ ಜ್ಞಾನ ಇದೆಯೇ ಇಲ್ಲವೇ ಎಂದು ನನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ್ ಕುಮಾರ್ ಕಿಡಿ ಕಾರಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪಠ್ಯಪುಸ್ತಕಗಳ ಮರು ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ತರಾತುರಿಯಲ್ಲಿ ತೆಗೆದಿರುವ ನಿರ್ಧಾರ ರಾಜ್ಯದ ನಾಗರಿಕರನ್ನು ತೀವ್ರವಾಗಿ ನೋಯಿಸಿದೆ. ಸದ್ಯ ಈ ವಿಚಾರದ ಕುರಿತು ಎಲ್ಲಾ ಗೊಂದಲಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ತೆರೆ ಎಳೆಯಲಿ ಅವರು ಒತ್ತಾಯಿಸಿದ್ದಾರೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಮತ್ತು ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯಗಳನ್ನು ಕಡೆಗಣಿಸಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಅಕ್ಷಮ್ಯ ಅಪರಾಧ ಎಂದು ಅವರು ತಿಳಿಸಿದ್ದಾರೆ.
ಇತಿಹಾಸವನ್ನು ತಿರುಚುವ ಯೋಜನೆಯ ಭಾಗವಾಗಿ ಎಳೆಯ ಪ್ರಾಯದ ಮಕ್ಕಳೇ ಸೂಕ್ತ ಎಂದು ಭಾವಿಸಿ ಪರಿಷ್ಕರಣಾ ಸಮಿತಿ ಈ ಪ್ರಯತ್ನಕ್ಕೆ ಕೈಹಾಕಿದೆ. ಗಾಂಧಿಯನ್ನು ಕೊಂದವರಿಗೆ ಸಹಜವಾಗಿ ಕೇಶವ ಬಲಿರಾಂ ಹೆಗ್ಡೇವಾರ್ ಅವರು ಸ್ವಾತಂತ್ರ್ಯ ಹೋರಾಟಗಾರನಾಗಿ ಗೋಚರಿಸಿದ್ದು ಸರಿಯಾಗಿದೆ ಎಂದು ರಮೇಶ್ ಕುಮಾರ್ ಕುಟುಕಿದ್ದಾರೆ.