Home ಟಾಪ್ ಸುದ್ದಿಗಳು ಸಮಾಜ ಒಡೆಯುವ ಶಕ್ತಿಗಳ ಪ್ರಯತ್ನ ವಿಫಲಗೊಳಿಸೋಣ | ಕೋಮು ಗಲಭೆ ಸಂಚಿನ ವಿರುದ್ಧ ಒಂದಾದ ವಿಪಕ್ಷ...

ಸಮಾಜ ಒಡೆಯುವ ಶಕ್ತಿಗಳ ಪ್ರಯತ್ನ ವಿಫಲಗೊಳಿಸೋಣ | ಕೋಮು ಗಲಭೆ ಸಂಚಿನ ವಿರುದ್ಧ ಒಂದಾದ ವಿಪಕ್ಷ ನಾಯಕರು

ದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರವನ್ನು ಪ್ರಮುಖ ವಿರೋದ ಪಕ್ಷಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವಂತೆ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಆಡಳಿತ ಪಕ್ಷದ ಒಂದು ವರ್ಗವು ಉದ್ದೇಶಪೂರ್ವಕವಾಗಿ ಆಹಾರ, ವಸ್ತ್ರ, ನಂಬಿಕೆ, ಹಬ್ಬಗಳು ಹಾಗೂ ಭಾಷೆ ವಿಚಾರವಾಗಿ ನಮ್ಮ ಸಮಾಜ ಒಡೆಯಲು ಪ್ರಯತ್ನಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ 13 ಪಕ್ಷಗಳ ನಾಯಕರು ಬರೆದಿರುವ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ದೇಶದ ಜನರಲ್ಲಿ  ದ್ವೇಷದ ಭಾಷಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹವರನ್ನು ಶಿಕ್ಷಿಸಬೇಕಾದವರೆ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಉದ್ಭವಿಸಿರುವ ಕೋಮು ಗಲಭೆಗಳನ್ನು ನಾವು ಖಂಡಿಸುತ್ತೇವೆ. ಇಂತಹ ಘಟನೆಗಳು ನಡೆದಿರುವ ಪ್ರದೇಶಗಳಲ್ಲಿ ಭೀಕರವಾಗಿ ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳು ತಿಳಿಸಿರುವುದು ಆತಂಕಕಾರಿಯಾಗಿದೆ. ಸಮಾಜದಲ್ಲಿ ಕಿಚ್ಚು ಹಚ್ಚುವ ದ್ವೇಷ ಭಾಷಣ, ಮಾರಕಾಸ್ತ್ರಗಳಿಂದ ಕೂಡಿರುವ ಧಾರ್ಮಿಕ ಯಾತ್ರೆಗಳು ಕೋಮು ಗಲಭೆಯನ್ನು ಹುಟ್ಟು ಹಾಕುವಂತಿವೆ.

ಇನ್ನು ಕೋಮು ದ್ವೇಷವನ್ನು ಬಿತ್ತಲು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಧ್ವನಿ ಹಾಗೂ ದೃಶ್ಯ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ.

ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳ ಮೌನ ಆಘಾತ ತಂದಿದೆ. ದ್ವೇಷ ಭಾಷಣ ಹಾಗೂ ಕೃತ್ಯಗಳ ಮೂಲಕ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವವರನ್ನು ಖಂಡಿಸುವ ಹಾಗೂ ಕ್ರಮಕೈಗೊಳ್ಳಲು ಅವರು ವಿಫಲರಾಗಿದ್ದಾರೆ. ಅವರ ಈ ಮೌನ ದುಷ್ಕರ್ಮಿಗಳು, ಗಲಭೆಕೊರರ ಕೃತ್ಯದಷ್ಟೇ ಪ್ರಮಾದವಾಗಲಿದೆ.

ಹೀಗಾಗಿ ಶತ ಶತಮಾನಗಳಿಂದ ದೇಶಕ್ಕೆ ಕೀರ್ತಿ ತಂದಿರುವ ಸೌಹಾರ್ದತೆಯನ್ನು ಮತ್ತೆ ಸ್ಥಾಪಿಸಲು ಹಾಗೂ ಜನರನ್ನು ಒಗ್ಗೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ನಮ್ಮ ಸಮಾಜವನ್ನು ಒಡೆಯುವ ವಿಷಕಾರಿ ಸೈದ್ಧಾಂತಿಕ ವಿಚಾರಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸುತ್ತೇವೆ.

ಹೀಗಾಗಿ ನಾವು ಎಲ್ಲ ವರ್ಗದ ಜನರಲ್ಲಿ ಈ ಮೂಲಕ ಮನವಿ ಮಾಡುತ್ತಾ, ಶಾಂತಿಯನ್ನು ಕಾಪಾಡಿ, ಸಮಾಜ ಒಡೆಯುವ ಸಮಾಜಘಾತುಕ ಶಕ್ತಿಗಳ ಪ್ರಯತ್ನಗಳನ್ನು ವಿಫಲಗೊಳಿಸುವಂತೆ ಕೇಳಿಕೊಳ್ಳುತ್ತೇವೆ. ನಾವೆಲ್ಲರೂ ನಮ್ಮ ಪಕ್ಷಗಳ ಘಟಕಗಳಿಗೆ ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಸ್ಥಾಪನೆಗೆ ಶ್ರಮಿಸುವಂತೆ ಕರೆ ನೀಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಎನ್ ಸಿಪಿ ನಾಯಕ ಶರದ್ ಪವಾರ್, ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟ್ಯಾಲಿನ್, ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್, ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲ, ತೇಜಸ್ವಿ ಯಾದವ್, ಡಿ.ರಾಜಾ, ದೇಬಬ್ರತಾ ಬಿಸ್ವಾಸ್, ಮನೋಜ್ ಭಟ್ಟಾಚಾರ್ಯ, ಪಿ.ಕೆ. ಕುನ್ಹಾಲಿಕುಟ್ಟಿ, ದೀಪಾಂಕರ್ ಭಟ್ಟಾಚಾರ್ಯ ಸಹಿ ಮಾಡಿದ್ದಾರೆ.

Join Whatsapp
Exit mobile version