Home ಟಾಪ್ ಸುದ್ದಿಗಳು ವಿಧಾನಪರಿಷತ್: ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಪ್ರಮಾಣ ವಚನ

ವಿಧಾನಪರಿಷತ್: ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಪ್ರಮಾಣ ವಚನ

ಬೆಂಗಳೂರು; ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಪಕ್ಷದ ಮುಖಂಡ ಹೆಚ್ ಪಿ ಸುದಾಮ್ ದಾಸ್ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಅವರು ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಹಲವು ಶಾಸಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಂ.ಆರ್. ಸೀತಾರಾಂ ಅವರ ಪತ್ನಿ ಶೃತಿ ಸೀತಾರಾಂ, ಪುತ್ರ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಅವರ ಪತ್ನಿ ಆಶಿತ ರಕ್ಷಾ ರಾಮಯ್ಯ, ಮತ್ತೋರ್ವ ಪುತ್ರ ಸುಂದರ್ ರಾಮ್ ಭಾಗವಹಿಸಿದ್ದರು.

ಎಂ.ಆರ್. ಸೀತಾರಾಂ ಅವರ ಮೊಮ್ಮಗ, ರಕ್ಷಾ ರಾಮಯ್ಯ ಅವರ ಪುತ್ರ ಸಮ್ಮರ್ ರಾಮಯ್ಯ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿಕೊಂಡು ಇದೇ ಸಂದರ್ಭದಲ್ಲಿ ಆಶಿರ್ವದಿಸಿದ್ದು ವಿಶೇಷವಾಗಿತ್ತು.


ಸೀತಾರಾಮ್ ಅವರನ್ನು ಶಿಕ್ಷಣತಜ್ಞ ಕೋಟಾದ ಅಡಿಯಲ್ಲಿ, ಉಮಾಶ್ರೀ ಅವರು ನಟಿಯಾಗಿ ನೀಡಿದ ಕೊಡುಗೆಗಾಗಿ ಮತ್ತು ದಾಸ್ ಅವರನ್ನು ಸಾಮಾಜಿಕ ಕಾರ್ಯಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version