Home ಟಾಪ್ ಸುದ್ದಿಗಳು ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಸುಪ್ರೀಂ ಕೋರ್ಟ್‌ ಕಿಡಿ

ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಸುಪ್ರೀಂ ಕೋರ್ಟ್‌ ಕಿಡಿ

0

ನವದೆಹಲಿ: ಸಿವಿಲ್‌ ಪ್ರಕರಣವನ್ನು ಕ್ರಿಮಿನಲ್‌ ಪ್ರಕರಣವಾಗಿ ಪರಿವರ್ತಿಸಿದ ವಿಚಾರವಾಗಿ ಉತ್ತರ ಪ್ರದೇಶದ ಪೊಲೀಸರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು‌ ಕಿಡಿಕಾರಿತು.

ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್, ಕೆ.ವಿ.ವಿಶ್ವನಾಥನ್‌ ಅವರನ್ನು ಒಳಗೊಂಡ ನ್ಯಾಯಪೀಠವು, ನಾಗರಿಕ ವಿಚಾರವನ್ನು ಕ್ರಿಮಿನಲ್‌ ಪ್ರಕರಣವಾಗಿ ಪರಿವರ್ತಿಸುವುದು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿತು.

ಸಿವಿಲ್‌ ಪ್ರಕರಣಗಳ ಇತ್ಯರ್ಥಕ್ಕೆ ದೀರ್ಘಕಾಲ ಹಿಡಿಯುತ್ತದೆ ಎಂಬ ಏಕಮಾತ್ರ ಕಾರಣಕ್ಕಾಗಿ ಎಫ್‌ಐಆರ್‌ ದಾಖಲಿಸಿ ಅವುಗಳನ್ನು ಕ್ರಿಮಿನಲ್‌ ಕಾನೂನು ವ್ಯಾಪ್ತಿಯಲ್ಲಿ ತರುವಿರಾ ಎಂದು ಪ್ರಶ್ನಿಸಿತು.

ಅಧಿಕಾರಿಗಳ ನಡೆಯನ್ನು ಟೀಕಿಸಿದ ಪೀಠ, ‘ಉತ್ತರ ಪ್ರದೇಶದಲ್ಲಿ ಏನಾಗುತ್ತಿದೆಯೋ ಅದು ತಪ್ಪು. ಪ್ರತಿದಿನವೂ ಸಿವಿಲ್‌ ಅರ್ಜಿಗಳನ್ನು ಕ್ರಿಮಿನಲ್‌ ಪ್ರಕರಣಗಳಾಗಿ ಪರಿವರ್ತಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿತು.

ತನಿಖಾಧಿಕಾರಿಯನ್ನು ಸಾಕ್ಷಿ ಕಟಕಟೆಗೆ ಕರೆಯುತ್ತೇವೆ. ಅಲ್ಲಿ ನಿಂತು ಅವರು ಕ್ರಿಮಿನಲ್‌ ಪ್ರಕರಣ ಎಂದು ಸಾಬೀತು ಮಾಡಲಿ. ತನಿಖಾಧಿಕಾರಿ ಪಾಠ ಕಲಿಯಬೇಕು ಎಂದು ಕಿಡಿಕಾರಿತು.

ಸಿವಿಲ್‌ ವ್ಯಾಜ್ಯವನ್ನು ಕ್ರಿಮಿನಲ್ ಕಾನೂನು ವ್ಯಾಪ್ತಿಯಲ್ಲಿ ಏಕೆ ತರಲಾಗುತ್ತಿದೆ ಎಂಬುದನ್ನು ವಿವರಿಸಿ, ಪ್ರಮಾಣಪತ್ರ ಸಲ್ಲಿಸಿ ಎಂದು ಪೊಲೀಸ್‌ ಮಹಾ ನಿರ್ದೇಶಕ ಮತ್ತು ಗೌತಮ ಬುದ್ಧ ನಗರ ಜಿಲ್ಲೆ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಅವರಿಗೆ ಸೂಚಿಸಿತು.

ನೊಯಿಡಾದ ಸೆಕ್ಟರ್‌–39 ಪೊಲೀಸ್‌ ಠಾಣೆಯ ತನಿಖಾಧಿಕಾರಿ ಸಾಕ್ಷಿ ಕಟಕಟೆಗೆ ಬಂದು, ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವ ಅಗತ್ಯವೇನಿತ್ತು ಎಂಬುದಾಗಿ ಉತ್ತರಿಸಬೇಕು ಎಂದು ಸೂಚಿಸಿತು.

ದೇಬು ಸಿಂಗ್‌ ಮತ್ತು ದೀಪಕ್‌ ಸಿಂಗ್‌ ಎಂಬುವವರ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದು ಮಾಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version