Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬಿ.ಟಿ.ಲಲಿತಾ ನಾಯ್ಕ್ ಆಕ್ರೋಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬಿ.ಟಿ.ಲಲಿತಾ ನಾಯ್ಕ್ ಆಕ್ರೋಶ

ಹಾಸನ: ಅನ್ನದಾತರಿಗೆ ಅನ್ಯಾಯ, ದಬ್ಬಾಳಿಕೆ, ಕಾರ್ಮಿಕರ ಶೋಷಣೆಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸಚಿವೆ ಲಲಿತಾ ನಾಯ್ಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ, ಬಡತನದಿಂದಾಗಿ ಯುವ ಜನತೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಜನಪರ ಕೆಲಸಗಳಿಗೆ ಹಣ ಇಲ್ಲ ಎನ್ನುತ್ತಾರೆ. ಮಾಡಬಾರದ ಕೆಲಸಗಳಿಗೆ ಯಥೇಚ್ಛ ಹಣ ಕೊಡಲಾಗುತ್ತಿದೆ ಎಂದರು.

ಕೋವಿಡ್ ನಿಂದಾಗಿ ಈಗಾಗಲೇ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದೆ. ಇದೀಗ ಶಾಲೆಗಳು ಆರಂಭವಾಗಿದ್ದರೂ, ಮಕ್ಕಳಿಗೆ ಪಠ್ಯಪುಸ್ತಕಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು. 

ಬರಗೂರು ಸಮಿತಿಯ ಪಠ್ಯಗಳು ಸಮಗ್ರ ಹಾಗೂ ಅರ್ಥಪೂರ್ಣವಾಗಿತ್ತು. ಆದರೆ, ಇಂದು ಏನೂ ಗೊತ್ತಿರದ ವ್ಯಕ್ತಿಯನ್ನು ತಂದು ಪಠ್ಯವನ್ನು ಸಂಪೂರ್ಣ ಹಾಳು ಮಾಡಲಾಗಿದೆ ಎಂದು ದೂರಿದರು.  ಹಿಜಾಬ್ ನಂತರ ಬೌದ್ಧ ಬಿಕ್ಕುಗಳು ಹಾಕುವ ಉಡುಪುಗಳಿಗೂ ಈಗ ನಿಷೇಧ ಹೇರಲಾಗುತ್ತಿದೆ. ಆಯಾ ಧರ್ಮದ ಪಾಲನೆ ಮಾಡಲು ಸರ್ಕಾರ ಬಿಡಬೇಕು. ಹಿಂದೂ ಸಂಘಟನೆಗಳು ಕ್ರೂರವಾದ ತರಬೇತಿ ನೀಡುತ್ತಿವೆ. ಕೇಳಿದರೆ ಆತ್ಮರಕ್ಷಣೆ ತರಬೇತಿ ಎನ್ನುತ್ತಾರೆ ಎಂದರು.

ಎಲ್ಲರಿಗೂ ಆರ್ಥಿಕ ಸ್ವಾವಲಂಬನೆ ಸಿಗಬೇಕು. ಉಚಿತ ಶಿಕ್ಷಣ, ಆರೋಗ್ಯ ನೀಡಬೇಕು. ಆದರೆ, ರಾಜ್ಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಭ್ರಷ್ಟಾಚಾರ ಕಾರಣವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಹಾಗೂ ಕಾನೂನು, ಸುವ್ಯವಸ್ಥೆ ಕಾಪಾಡಲು ಆಗದೇ ಇದ್ದರೆ, ಬಿಜೆಪಿ ಅಧಿಕಾರದಿಂದ ಕೆಳಗಿಳಿಯಲಿ ಎಂದು ಒತ್ತಾಯಿಸಿದರು. 

ಜನತಾ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡುವುದರ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು ಎಂದು ತಿಳಿಸಿದರು. 

ಕಾಡಿನಲ್ಲಿ ಮೊದಲಿನಿಂದಲೂ ಉಳಿದುಕೊಂಡು ತಮಗೆ ಬೆಳೆ ಬೆಳೆದುಕೊಳ್ಳುತ್ತಿದ್ದಾರೆ. ಅಂಥವರಿಗೆ 3 ಎಕರೆವರೆಗೆ ಜಮೀನಿನ ಹಕ್ಕು ನೀಡಬೇಕು. ಆದರೆ, ಅವರ ಹೆಸರಿಗೆ ಪಹಣಿ ಮಾಡಬಾರದು. ಹಾಗೆ ಮಾಡಿದಲ್ಲಿ ಆ ಜಮೀನು ಮಾರಾಟ ಮಾಡುವ ಸಾಧ್ಯತೆ ಇರುತ್ತದೆ ಎಂದ ಅವರು, ಕಾಡಿನಲ್ಲಿ ಇರುವ ಜನರು ಕಾಡಿನ ರಕ್ಷಕರೇ ಹೊರತು, ಹಾಳು ಮಾಡುವವರಲ್ಲ ಎಂದರು.  ಪದಾಧಿಕಾರಿಗಳಾದ ಎನ್. ನಾಗೇಶ್, ಅಶೋಕ್, ಟಿ.ಸಿ.ರಾಜೇಂದ್ರ, ಹೊನ್ನೇಗೌಡ, ಬೈರೇಗೌಡ ಉಪಸ್ಥಿತರಿದ್ದರು.

Join Whatsapp
Exit mobile version