Home Uncategorized ಹಿಂದೂ ಜನ ಜಾಗೃತಿ ಸಮಿತಿ ದೂರು ಹಿನ್ನಲೆ, ಇಮ್ರಾನ್ ಖಾನ್ ಜೀವನ ಚರಿತ್ರೆ ಕುರಿತ ಪುಸ್ತಕ...

ಹಿಂದೂ ಜನ ಜಾಗೃತಿ ಸಮಿತಿ ದೂರು ಹಿನ್ನಲೆ, ಇಮ್ರಾನ್ ಖಾನ್ ಜೀವನ ಚರಿತ್ರೆ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸ್ಥಳಾಂತರ

ಬೆಂಗಳೂರು: ನಗರದ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಗುರುವಾರ ಸಂಜೆ ನಡೆಯಬೇಕಿದ್ದ ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೀವನ ಕುರಿತ ಕನ್ನಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೆಲವರ ವಿರೋಧದಿಂದಾಗಿ ದಿಢೀರನೇ ಸ್ಥಳಾಂತರವಾಯಿತು.

ಲೇಖಕ ಸುಧಾಕರ್ ಎಸ್ ಬಿ ಬರೆದಿರುವ “ಇಮ್ರಾನ್ ಖಾನ್: ಒಂದು ಜೀವಂತ ದಂತ ಕಥೆ” ಪುಸ್ತಕ ಬಿಡುಗಡೆಗೆ ಸಂಘಪರಿವಾರದ ಹಿಂದೂ ಜನಜಾಗೃತಿ ಸಮಿತಿ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಕಲಾಗ್ರಾಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಹಾಗಾಗಿ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ಸ್ಥಳಾಂತರಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ನಿಯಾಜಿ ಎಂಬ ಬುಡಕಟ್ಟು ಜನಾಂಗದಲ್ಲಿ ಹುಟ್ಟಿ, ಕ್ರಿಕೆಟ್ ಆಟದಲ್ಲಿ ವಿಶ್ವಮಟ್ಟದ ತಾರೆಯಾಗಿ ಬೆಳಗಿ, ತನ್ನ ತಾಯಿ ಶೌಕತ್ ಖಾನಂ ಸ್ಮರಣಾರ್ಥ ಆಸ್ಪತ್ರೆ ನಿರ್ಮಿಸಿ ಬಡವರಿಗೆ ನೆರವಾಗಿ, ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಿದ ಇಮ್ರಾನ್ ಖಾನ್ ಅವರ ಬದುಕು ಮತ್ತು ಸಾಧನೆ ಕುರಿತು ಎಸ್ ಬಿ ಸುಧಾಕರ್ ಕೃತಿ ರಚಿಸಿದ್ದು, ಬೆಂಗಳೂರಿನ ಪ್ರಮಥ ಪ್ರಕಾಶನ ಪ್ರಕಟಿಸಿದೆ.

ನಿಗದಿತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ವಹಿಸಬೇಕಿತ್ತು. ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಹಾಗೂ ಡಾ. ವಡ್ಡಗೆರೆ ನಾಗರಾಜಯ್ಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದರು.

ಕಾರ್ಯಕ್ರಮ ಸ್ಥಳಾಂತರ
ಮಲ್ಲತಹಳ್ಳಿಯ ಕಲಾಗ್ರಾಮ ಸರ್ಕಾರಿ ಜಾಗವಾದ್ದರಿಂದ ಹಿಂದೂ ಜಾಗರಣಾ ವೇದಿಕೆಯವರು ದೂರು ಕೊಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದರಿಂದ, ಕೊನೇ ಕ್ಷಣದಲ್ಲಿ ಕಲಾಗ್ರಾಮದ ಬಳಿ ಇರುವ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಬಳಿಯ ಡಿ ಗ್ರೂಪ್ ಬಡಾವಣೆಗೆ ಸ್ಥಳಾಂತರ ಮಾಡಲಾಯಿತು. ಕಾರ್ಯಕ್ರಮದ ಸ್ಥಳ ಬದಲಾವಣೆಯಾದರೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಯಂತೆ ನಡೆಯಿತು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version