ಲಕ್ನೋ: ಲಖಿಂಪುರ ಖೇರಿಯ ತಿಕುನಿಯಾದಲ್ಲಿ ನಡೆದ ರೈತರು ಮತ್ತು ಪತ್ರಕರ್ತನ ಸಹಿತ ಎಂಟು ಜನರ ಸಾವಿಗೆ ಕಾರಣವಾದ ಘಟನೆಯ ನೇರ ಸಾಕ್ಷಿ ದಿಲ್ಬಾಗ್ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
2021ರ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿಯಲ್ಲಿ ನಡೆದ ಸಾವುಗಳಿಗೆ ಸಂಬಂಧಿಸಿದಂತೆ ಕೇಂದ್ರ ಮಂತ್ರಿ ಅಜಯ್ ಮಿಶ್ರಾರ ಮಗ ಆಶಿಸ್ ಮಿಶ್ರಾ ಬಂಧನದಲ್ಲಿದ್ದಾನೆ.
ಬಿಕೆಯು- ಭಾರತೀಯ ಕಿಸಾನ್ ಯೂನಿಯನ್ ನಾಯಕರಲ್ಲೊಬ್ಬರಾಗಿರುವ ದಿಲ್ಬಾಗ್ ಸಿಂಗ್ ಲಖಿಂಪುರ ಖೇರಿ ಬಿಕೆಯು ಘಟಕದ ಅಧ್ಯಕ್ಷರೂ ಆಗಿದ್ದಾರೆ. ಮಂಗಳವಾರ ರಾತ್ರಿ ಅಪರಿಚಿತರು ಅವರನ್ನು ದಾರಿಯಲ್ಲಿ ಅಡ್ಡ ಹಾಕಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಯಾವುದೇ ಗಾಯಗಳಾಗದೆ ಪರಾಗಿದ್ದಾರೆ. ಕ್ಷಣಾರ್ಧದಲ್ಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಡ ರಾತ್ರಿ ಮನೆಗೆ ಬರುವ ದಾರಿಯಲ್ಲಿ ದಾಳಿಗಾರರು ನನ್ನ ಕಾರಿನತ್ತ ಗುಂಡು ಹಾರಿಸಿದ್ದಾರೆ. ಆದರೆ ಅವರು ವೇಗವಾಗಿ ದಾಳಿ ಮಾಡಿ ಪರಾರಿಯಾಗಿದ್ದಾರೆ. ವಾಹನಕ್ಕೆ ತುಸು ಹಾನಿಯಾಗಿದ್ದರ ಹೊರತು ನನಗೆ ಗಾಯವಾಗಿಲ್ಲ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾಗಿ ಪೋಲೀಸರು ತಿಳಿಸಿದ್ದಾರೆ.
ಲಖಿಂಪುರ ಖೇರಿಯ ಗೋಲಾ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ಮೇಲೆ ಎಫ್ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಾವು ತನಿಖೆ ಆರಂಭಿಸಿದ್ದೇವೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕುಮಾರ್ ಹೇಳಿದ್ದಾರೆ. ದಿಲ್ಬಾಗ್ ಸಿಂಗ್ ರಿಗೆ ಪೊಲೀಸ್ ಸಿಬ್ಬಂದಿಯೊಬ್ಬರ ರಕ್ಷಣೆ ನೀಡಲಾಗಿತ್ತು. ಆದರೆ ಘಟನೆ ನಡೆದ ಸಮಯದಲ್ಲಿ ಅವರು ಹಾಜರಿರಲಿಲ್ಲ.
ಎಂಟೂವರೆ ಗಂಟೆ ದಾಟಿದ ಸಮಯ, ನಾನು ನನ್ನ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ನನ್ನ ಕಾರಿನ ಹಿಂದೆ ಇಬ್ಬರು ಮೋಟಾರು ಸೈಕಲ್ ನಲ್ಲಿ ಬಂದರು. ಅವರು ನನ್ನ ಕಾರಿನತ್ತ ಗುಂಡು ಹಾರಿಸಿದರು. ನನ್ನ ಕಾರಿನ ಹಿಂಭಾಗ ಹಾನಿಯಾಗಿದೆ ಮತ್ತು ಒಂದು ಟಯರ್ ಒಡೆದಿದೆ. ಇನ್ನೂ ಮುಂದೆ ಹೋಗಿ ಕಾರು ನಿಂತಿದೆ. ಬೈಕ್ ದಾಳಿಗರು ಅಲ್ಲಿಗೂ ಬಂದು ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸಿದರು. ಆದರೆ ಆಗಿಲ್ಲ. ಕಾರಿನತ್ತು ಮತ್ತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ದಿಲ್ಬಾಗ್ ಸಿಂಗ್ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.
ಭದ್ರತೆಗಿದ್ದ ಪೊಲೀಸ್ ಎಲ್ಲಿದ್ದರು ಎಂಬ ಪ್ರಶ್ನೆಗೆ, ಆತನು ಏನೋ ಕೆಲಸದ ಮೇಲೆ ಮಾಹಿತಿ ನೀಡಿ ಹೋಗಿದ್ದ. ಘಟನೆ ನಡೆದ 15 ನಿಮಿಷದ ಬಳಿಕ ಹಿಂದಿರುಗಿದ್ದಾನೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದರು.