Home ಟಾಪ್ ಸುದ್ದಿಗಳು ಲಖಿಂಪುರ್ ಖೇರಿ ಪ್ರಕರಣ: ಆಶಿಷ್ ಮಿಶ್ರಾ ಸೇರಿ ಇಬ್ಬರಿಗೆ ಜಾಮೀನು ನಿರಾಕರಿಸಿದ ಉತ್ತರ ಪ್ರದೇಶ ನ್ಯಾಯಾಲಯ

ಲಖಿಂಪುರ್ ಖೇರಿ ಪ್ರಕರಣ: ಆಶಿಷ್ ಮಿಶ್ರಾ ಸೇರಿ ಇಬ್ಬರಿಗೆ ಜಾಮೀನು ನಿರಾಕರಿಸಿದ ಉತ್ತರ ಪ್ರದೇಶ ನ್ಯಾಯಾಲಯ

ಲಕ್ನೋ: ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರು ಸೇರಿ 8 ಮಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಉತ್ತರಪ್ರದೇಶದ ನ್ಯಾಯಾಲಯ ತಿರಸ್ಕರಿಸಿದೆ.


ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುಖೇಶ್ ಮಿಶ್ರಾ ಆದೇಶ ಹೊರಡಿಸಿದ್ದಾರೆ. ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ʼನ್ಯಾಯಾಲಯ ಅರ್ಜಿ ತಿರಸ್ಕರಿಸುವಾಗ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ತನಿಖೆ ನಡೆಯುವ ಅಗತ್ಯವಿದೆ ಎಂಬುದಾಗಿ ಅಭಿಪ್ರಾಯಪಟ್ಟಿದೆʼ ಎಂದು ಸರ್ಕಾರಿ ವಕೀಲ ಅರವಿಂದ್ ತ್ರಿಪಾಠಿ ಪತ್ರಕರ್ತರಿಗೆ ತಿಳಿಸಿದರು.


ಕಳೆದ ತಿಂಗಳು ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಲಖಿಂಪುರ್ ಖೇರಿಯ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ್ದರು. ಮಿಶ್ರಾ ಸೇರಿದಂತೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 13ಕ್ಕೆ ಏರಿದೆ.ಕೃಷಿ ಕಾಯಿದೆ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಮಂದಿ ಮೇಲೆ ಆಶಿಷ್ ಮಿಶ್ರಾ ಅವರಿಗೆ ಸೇರಿದ ನಾಲ್ಕು ಚಕ್ರದ ವಾಹನ ಹರಿದು ನಾಲ್ವರು ರೈತರು ಜೀವತೆತ್ತಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತರಾಗಿದ್ದರು. ಅಕ್ಟೋಬರ್ 9ರಂದು ಟೇನಿ ಅವರನ್ನು ಬಂಧಿಸಲಾಗಿತ್ತು.


ಈ ಮಧ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಅವರ ಹೆಸರನ್ನು ಅಂತಿಮಗೊಳಿಸಲು ಸುಪ್ರೀಂಕೋರ್ಟ್ ಒಂದು ದಿನದ ಕಾಲಾವಕಾಶ ಪಡೆದಿದೆ. ಉತ್ತರ ಪ್ರದೇಶ ಸರ್ಕಾರ ರಚಿಸಿರುವ ನ್ಯಾಯಾಂಗ ತನಿಖಾ ಆಯೋಗದ ಮೇಲೆ ವಿಶ್ವಾಸವಿಲ್ಲ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದ ನಂತರ ಹೆಸರು ಅಂತಿಮಗೊಳಿಸುವುದಾಗಿ ತಿಳಿಸಿತ್ತು.
ತನಿಖೆಯ ಮೇಲ್ವಿಚಾರಣೆಗಾಗಿ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರಿರುವ ಏಕ ಸದಸ್ಯ ಆಯೋಗವನ್ನು ಉತ್ತರಪ್ರದೇಶ ಸರ್ಕಾರ ರಚಿಸಿತ್ತು. ನ. 17ರಂದು ಬುಧವಾರ ಸುಪ್ರೀಂಕೋರ್ಟ್ ಆಯೋಗ ರಚಿಸುವ ಕುರಿತು ಆದೇಶ ನೀಡುವ ಸಾಧ್ಯತೆ ಇದೆ.

Join Whatsapp
Exit mobile version