Home ಟಾಪ್ ಸುದ್ದಿಗಳು ಕುವೆಂಪು ಅಂದರೆ ಕನ್ನಡ, ಬಸವ ಅಂದರೆ ಕರ್ನಾಟಕ | ಇವರಿಬ್ಬರಿಗೂ ಕುತ್ತು ಬಂದಿದೆ: ಕಹಳೆಯೂದಿದ ಹಂಸಲೇಖ

ಕುವೆಂಪು ಅಂದರೆ ಕನ್ನಡ, ಬಸವ ಅಂದರೆ ಕರ್ನಾಟಕ | ಇವರಿಬ್ಬರಿಗೂ ಕುತ್ತು ಬಂದಿದೆ: ಕಹಳೆಯೂದಿದ ಹಂಸಲೇಖ

ಶಿವಮೊಗ್ಗ: ಕುವೆಂಪು ಅಂದರೆ ಕನ್ನಡ, ಬಸವ ಅಂದರೆ ಕರ್ನಾಟಕ. ಇವರಿಬ್ಬರಿಗೂ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡುವುದು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದ್ದಾರೆ.


ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು. ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಎಫ್ ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು. ಪಠ್ಯಪುಸ್ತಕ ಸಮಿತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಕುವೆಂಪು ಹುಟ್ಟೂರು ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಬುಧವಾರ ಬೆಳಿಗ್ಗೆ ಪಾದಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.


ಕನ್ನಡಕ್ಕೆ ಮಹಾಮನೆ ಕಲ್ಯಾಣ, ಕವಿಮನೆ ಕವಿಶೈಲವಾಗಿದೆ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು ಎಂದು ಪ್ರಶ್ನಿಸಿದರು. ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿಪಕ್ಷದವರು ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಆ ರೀತಿ ನಾಡಿನಾದ್ಯಂತ ಮೊಳಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ, ನಾಡೇ ನಮಗೆ ಒಂದು ಧ್ವಜ, ಇವೆರಡಕ್ಕೂ ಅವಮಾನವಾಗಿದೆ. ಕನ್ನಡವನ್ನು ಮುರಿಯುವ ನಡೆ ರಾಜ್ಯದಲ್ಲಿ ಆರಂಭವಾಗಿದೆ. ಕನ್ನಡಪರ ಹೋರಾಟ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

Join Whatsapp
Exit mobile version