ಬೆಂಗಳೂರು: ದೇಶದ ರಕ್ಷಣಾ ಕೆಲಸದಲ್ಲಿ ತೊಡಗುವಂತಹ ಸೈನಿಕರ ಒಳಗೇ ಗುತ್ತಿಗೆ ಸೈನಿಕರು ಮತ್ತು ಪರ್ಮನೆಂಟ್ ಸೈನಿಕರು ಎಂಬ ಭೇದ ಭಾವ ಮೂಡಿಸುವುದು ಎಷ್ಟು ಸರಿ?. ಈ ಜವಾಬ್ದಾರಿ ರಹಿತ ನಡೆಯು ದೇಶದ ಭದ್ರತೆಗೆ ಮಾರಕವಲ್ಲವೇ? ಈ ಬಗ್ಗೆ ನಮ್ಮ RSS ನ ನಕಲಿ ದೇಶಪ್ರೇಮಿಗಳು ಏನು ಹೇಳುತ್ತಾರೆ? ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಗಡಿ ಕಾಯುವ ಯೋಧರನ್ನು ಗುತ್ತಿಗೆ ಆಧಾರದಲ್ಲಿ ಸೇವೆ ಮಾಡುವ ಕೇಂದ್ರ ಸರ್ಕಾರದ ಹುನ್ನಾರಕ್ಕೆ ನನ್ನ ಧಿಕ್ಕಾರ!! ಎಂದು ಕಿಡಿಕಾರಿದ್ದಾರೆ.
ಚುನಾವಣಾ ವರ್ಷಗಳಲ್ಲಿ ಉದ್ಯೋಗ ಕ್ರಾಂತಿ ಎಂದು ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರದ ಪ್ರಚಾರದ ಹುಚ್ಚಿಗೆ ದೇಶದ ಬೊಕ್ಕಸವೂ ಖಾಲಿಯಾಗುತ್ತಿದೆ ಮತ್ತು ಜನರ ತೆರಿಗೆ ಪಾವತಿ ಪ್ರಮಾಣವೂ ಹೆಚ್ಚುತ್ತಿದೆ. ಸೈನಿಕರ ಬದುಕಲ್ಲಿ ಅಭದ್ರತೆ ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು ಸೈನಿಕರನ್ನು ಸರಿಯಾದ ಕ್ರಮದಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗದಂತಹ ದುರ್ಬಲ ಆರ್ಥಿಕ ಪರಿಸ್ಥಿತಿಯನ್ನು ಸೃಷ್ಟಿಸಿ ಸೈನಿಕರ ತ್ಯಾಗವನ್ನೂ ಸಹ ಅವಮಾನಿಸುತ್ತಿದ್ದಾರೆ. ದುರ್ಬಲ ಆರ್ಥಿಕತೆಯ ಮೂಲಕ ಸೈನಿಕರಿಗೆ ಸಂಬಳವನ್ನೂ ನೀಡಲು ಪರದಾಡುತ್ತಿರುವ ನರೇಂದ್ರ ಮೋದಿ ಸರ್ಕಾರವು, ಸೈನಿಕರನ್ನೂ ಸಹ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಹೊರಟಿದ್ದು ಸೇನಾ ನೇಮಕಾತಿ ಎಂಬ ಗಂಭೀರ ಸಂಗತಿಯನ್ನೂ ಸಹ ದುರ್ಬಲಗೊಳಿಸಲು ಹೊರಟಿದೆ. ದೇಶದ ಭದ್ರತೆ ಎಂಬುದು ಕಡೆಗಣನೆಗೆ ಒಳಪಡುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಮಹದೇವಪ್ಪ ಟೀಕಿಸಿದ್ದಾರೆ.