Home ಟಾಪ್ ಸುದ್ದಿಗಳು ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರ: ಸಿದ್ಧರಾಮಯ್ಯ ಕಿಡಿ

ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರ: ಸಿದ್ಧರಾಮಯ್ಯ ಕಿಡಿ

ತುಮಕೂರು : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಭಗವಾಧ್ವಜ ಹಾರಿಸಿದ್ದರ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಪ್ರತಿಭಟನೆ ಮಾಡಲು ಹೋಗುತ್ತಾರೆ ಎಂದರೆ ಇದು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಹಾಗೂ ಪ್ರಚೋದನೆ ನೀಡಲು ಮಾಡುತ್ತಿರುವ ರಾಜಕೀಯ ಕುತಂತ್ರ. ಅವರು ಈಗ ಬಿಜೆಪಿ ವಕ್ತಾರ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿರುವುದರಿಂದ ಈಗ ಬಿಜೆಪಿಯ ವಕ್ತಾರರಾಗಿದ್ದಾರೆ. ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಪಕ್ಷದ ಹೆಸರಿನ ಜೊತೆಗೆ ಜಾತ್ಯತೀತ ಎಂದು ಇಟ್ಟುಕೊಂಡಿದ್ದಾರೆ. ಜಾತ್ಯತೀತ ಎಂದರೆ ಏನು? ಬಿಜೆಪಿ ಅವರೊಂದಿಗೆ ಸೇರಿಕೊಂಡರೆ ಇವರನ್ನು ಏನೆಂದು ಕರೆಯಬೇಕು ಎಂದರು.

ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ

ಹೆಸರಿನಲ್ಲಿ ರಾಮ ಇದ್ದರೆ ಸಾಲದು ನಡವಳಿಕೆ ಸರಿಯಾಗಿರಬೇಕು ಎಂದಿರುವ ಕುಮಾರಸ್ವಾಮಿಯವರು ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ ಎಂದು ತಿರುಗೇಟು ನೀಡಿದರು.

ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸುತ್ತೇವೆ, ಯಾವುದೇ ಧರ್ಮದ ಧ್ವಜವನ್ನು ಹಾಕುವುದಿಲ್ಲ ಎಂದು ಹೇಳಿ ಅದನ್ನು ಉಲ್ಲಂಘಿಸಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ಬರೆದುಕೊಟ್ಟಿದ್ದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.

ಇಬ್ಬರಿಗೆ ಲಾಠಿ ಚಾರ್ಜ್ ವೇಳೆ ಗಾಯವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪೋಲಿಸರಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಇದೆ ಪೋಲಿಸಿನವರಿಗೆ ಹೊಡೆದರೆ ಏನು ಮಾಡುತ್ತಾರೆ ಎಂದರು.

ಧ್ವಜದ ವಿಚಾರದಲ್ಲಿ ನಕಲಿ ದಾಖಲೆ ಸೃಷಿಯಾಗಿದ್ದು, ಘಟನೆಗೆ ಜಿಲ್ಲಾಧಿಕಾರಿ ಕಾರಣ, ಅವರು ಅಮಾನತು ಆಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನು ಗೊತ್ತಿದೆ. ಅವರು ಹೇಳಿದ್ದನ್ನು ಈವರೆಗೆ ಸಾಬೀತು ಮಾಡಿದ್ದಾರೆಯೇ? ಸುಮ್ಮನೆ ಆರೋಪ ಮಾಡಬೇಕೆಂದು ಮಾಡುತ್ತಿದ್ದಾರೆ ಎಂದರು. ಕಾನೂನನ್ನು ಯಾರೇ ಕೈಗೆತ್ತಿಕೊಂಡರೆ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.


Join Whatsapp
Exit mobile version