Home ಟಾಪ್ ಸುದ್ದಿಗಳು ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ; ರಾಜ್ಯ ಸರಕಾರಕ್ಕೆ HDK ಸಲಹೆ

ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ; ರಾಜ್ಯ ಸರಕಾರಕ್ಕೆ HDK ಸಲಹೆ

ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯಲ್ಲೇ ಗೊಂದಲ ಎಂದ ಮಾಜಿ ಸಿಎಂ


ಬೆಂಗಳೂರು: ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಭಾರೀ ಪ್ರಮಾಣದಲ್ಲಿ ಏರುತ್ತಿರುವ ಕಾರಣ ಮುಂದಿನ 15-20 ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಸಲಹೆ ಮಾಡಿದರು.


ರಾತ್ರಿ ಕರ್ಫ್ಯೂ ಬಗ್ಗೆ ಬಿಜೆಪಿ ಹಾಗೂ ಸರಕಾರದ ನಡುವೆ ಗೊಂದಲ ಇದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದೂ ಅವರು ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಶಾಲಾ ಕಾಲೇಜು, ವಸತಿ ನಿಲಯಗಳನ್ನು ಕೆಲ ಕಾಲ ಬಂದ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಮಕ್ಕಳು, ವಿದ್ಯಾರ್ಥಿಗಳು ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ಕೊಟ್ಟರು.


ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಿಂದ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹಾಗಿದ್ದರೂ ರಾಜ್ಯದಲ್ಲಿ ದಿನೇ ದಿನೆ ಕೋವಿಡ್ ಅನಾಹುತಗಳ ಗ್ರಾಫ್ ಏರುತ್ತಿದೆ. ಅದರ ಜತೆಗೆ ಈ ಕರ್ಫ್ಯೂ ಬಗ್ಗೆ ಬಿಜೆಪಿ ಮುಖಂಡರಲ್ಲೇ ಕೆಲವು ಗೊಂದಲಗಳಿವೆ ಎಂದರು ಅವರು.
ಆಡಳಿತ ಪಕ್ಷದ ಕೆಲ ಪ್ರಮುಖರು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅದರ ಪರ ಮಾತನಾಡುತ್ತಾರೆ. ಜನ ಯಾರ ಮಾತು ಕೇಳಬೇಕು? ವ್ಯಾಪಾರಿಗಳು, ಹೋಟೆಲ್ ವ್ಯಾಪಾರಿಗಳು, ಇನ್ನಿತರೆ ಸಂಘಟನೆಗಳು ಸಹ ಇದಕ್ಕೆ ವಿರೋಧ ಇದ್ದಾರೆ. ಆದರೂ ಬಿಜೆಪಿ ಮುಖಂಡರ ಗೊಂದಲಮಯ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.


ನೈಟ್ ಕರ್ಫ್ಯೂ ಜಾರಿ ಮಾಡಿದಾರೆ, ನಿಜ. ಆದರೆ ಕೆಲ ಕಡೆ ವಾಹನಗಳು, ಜನರು ಓಡಾಡ್ತಾ ಇದಾರೆ. ಇದು ಹೊಸ ಅಪಾಯಕ್ಕೆ ದಾರಿ ಆಗದಿರಲಿ. ನೈಟ್ ಕರ್ಫ್ಯೂನಿಂದ ಸಂಪೂರ್ಣವಾಗಿ ಕೋವಿಡ್ ಹತೋಟಿ ಬರುವುದು ಸಾಧ್ಯವೇ? ತಜ್ಞರು ಯಾವ ಅಧಾರದ ಮೇಲೆ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.

ನೈಟ್ ಕರ್ಫ್ಯೂನಿಂದ ಸಮಸ್ಯೆ ಬಗೆಹರಿಯುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ವೀಕೆಂಡ್ ಲಾಕ್ ಡೌನ್ ಕೂಡ ಎಷ್ಟು ಉಪಯೋಗ ಆಗುತ್ತಿದೆ ಎನ್ನುವುದನ್ನು ನೋಡಬೇಕು. ಜನ ಸಾಮಾನ್ಯರ ಜೀವನಕ್ಕೆ ತೊಂದರೆ ಆಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ಹಿಂದೆ ನೀಡಿದ್ದಕ್ಕಿಂತ ಉತ್ತಮ ಪ್ಯಾಕೆಜ್ ನೀಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಜನರು ಎಚ್ಚರಿಕಯಿಂದಿರಬೇಕು:


ಮುಂದಿನ ಎರಡು ಮೂರು ತಿಂಗಳು ರಾಜ್ಯದ ಧಾರ್ಮಿಕ ಕ್ಷೇತ್ರಗಳಲ್ಲಿ ಜಾತ್ರಾ ಉತ್ಸವಗಳನ್ನೂ ರದ್ದು ಮಾಡಿದೆ ಸರಕಾರ. ಮುಂದಿನ ಒಂದು ವರ್ಷದ ಹೊತ್ತಿಗೆ ಚುನಾವಣೆಗಳು ಆರಂಭ ಆಗುತ್ತವೆ. ರಾಜಕೀಯ ಸಭೆ ಸಮಾರಂಭಗಳು ನಡೆಯುತ್ತವೆ. ರಾಜಕಾರಣಿಗಳು ಸಭೆ ಸಮಾರಂಭ ಮಾಡಿದಾಗ ಜನ ನಮಗೆ ಒಂದು ನಿಯಮ ನಿಮಗೊಂದು ನಿಯಮ ಏಕೆ ಎಂದು ಕೇಳಬಾರದು. ಅಂತ ಪರಿಸ್ಥಿತಿಯನ್ನು ನಾಯಕರು ತಂದುಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ಜನರು ಕೂಡ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು. ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಬದುಕು ಕಟ್ಟಿಕೊಳ್ಳಬೇಕು ಎಂದ ಅವರು; ಈ ಸಲ ಎರಡನೇ ಅಲೆಯಲ್ಲಿ ಆದಂತಹ ದೊಡ್ಡ ಪ್ರಮಾಣದ ಅನಾಹುತಗಳು ಆಗಲಿಲ್ಲ. ಆ ರೀತಿ ಏನಾದರೂ ಆಗಿದ್ದಿದ್ದರೆ ಆಸ್ಪತ್ರೆಗಳಲ್ಲಿ ಜಾಗ ಸಿಗುತ್ತಿರಲಿಲ್ಲ. ಸದ್ಯಕ್ಕೆ ಅಂತಹಾ ಪರಿಸ್ಥಿತಿ ಇಲ್ಲ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.


ಕಾಂಗ್ರೆಸ್ ಪಾದಯಾತ್ರೆಯನ್ನು ಕುಟುಕಿದ ಹೆಚ್ ಡಿಕೆ:
ಇದೇ ವೇಳೆ ಕಾಂಗ್ರೆಸ್ ಪಕ್ಷ ನಡೆಸಿದ ಮೇಕೆದಾಟು ಪಾದಯಾತ್ರೆಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿಗಳು, ಇತ್ತಿಚೆಗೆ ಪಾದಯಾತ್ರೆ ಹೆಸರಿನಲ್ಲಿ ಒಂದು ಜಾತ್ರೆ ನಡೆಯಿತು. ಅದಾದ ಬಳಿಕ ಎಲ್ಲರಿಗೂ ಅದೇ ರೂಢಿ ಆಯ್ತು. ಅವರು ಮಾತ್ರ ಮಾಡಬಹುದು ನಮಗೆ ಯಾಕೆ ನಿರ್ಭಂಧ ಅಂತ ಜನ ಸಾಮಾನ್ಯರು ಮಾತಾಡುವಂತೆ ಆಯಿತು. ಈ ಮೂಲಕ ರಾಮನಗರ ಸೇರಿ ರಾಜ್ಯದ ಎಲ್ಲೆಡೆ ಸೋಂಕು ಜಾಸ್ತಿ ಆಯಿತು ಎಂದರು.


ವ್ಯಾಕ್ಸಿನ್ ಪಡೆದವರಿಗೆ ಕೋವಿಡ್ ಬಂದರೂ ಬೇಗ ವಾಸಿ ಆಗುತ್ತಿದೆ. ಆದರೆ ಲಸಿಕೆ ಪಡೆಯದ ಮಕ್ಕಳ ಸ್ಥಿತಿ ಏನು? ಅದೃಷ್ಟಕ್ಕೆ ಜೀವಹಾನಿ ಆಗುತ್ತಿರುವ ಘಟನೆಗಳು ಕಡಿಮೆ ಇವೆ. ಇದು ಸಮಾಧಾನದ ಸಂಗತಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮುಂತಾದವರು ಹಾಜರಿದ್ದರು.

Join Whatsapp
Exit mobile version