Home ಜಾಲತಾಣದಿಂದ ಉಚಿತ ಪ್ರಯಾಣದ ಗ್ಯಾರಂಟಿ ಬಗ್ಗೆ ಮಹಿಳೆಯರು, ಕಂಡಕ್ಟರ್​ಗಳ ಮಧ್ಯೆ ವಾಗ್ವಾದ| ಸಿಎಂಗೆ ಪತ್ರ ಬರೆದ KSRTC

ಉಚಿತ ಪ್ರಯಾಣದ ಗ್ಯಾರಂಟಿ ಬಗ್ಗೆ ಮಹಿಳೆಯರು, ಕಂಡಕ್ಟರ್​ಗಳ ಮಧ್ಯೆ ವಾಗ್ವಾದ| ಸಿಎಂಗೆ ಪತ್ರ ಬರೆದ KSRTC

ಸಾಂದರ್ಭಿಕ ಚಿತ್ರ(KSRTC)

ಬೆಂಗಳೂರು: ಜನರು ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿರುವ ನಿದರ್ಶನಗಳ ನಡುವೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂಬ ಕಾಂಗ್ರೆಸ್ ಸರ್ಕಾರದ ಚುನಾವಣಾ ಭರವಸೆಯನ್ನು ಉಲ್ಲೇಖಿಸಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಟಿಕೆಟ್ ವಿಚಾರವಾಗಿ ಕಂಡಕ್ಟರ್‌ಗಳೊಂದಿಗೆ ವಾಗ್ವಾದ ನಡೆಸುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿದೆ.

 ಇಂತಹ ಘಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಭರವಸೆ ಈಡೇರಿಸುವಂತೆ ಒತ್ತಾಯಿಸಿದೆ.

‘ಟಿಕೆಟ್ ದರವನ್ನು ಪಾವತಿಸದೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ಮಹಿಳಾ ಪ್ರಯಾಣಿಕರು ಕಂಡಕ್ಟರ್‌ಗಳನ್ನು ಒತ್ತಾಯಿಸುತ್ತಿದ್ದಾರೆ. ಬಸ್ ಪ್ರಯಾಣದ ವೇಳೆ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಹಲವು ಬಾರಿ ವಾಗ್ವಾದಗಳು ನಡೆದಿವೆ. ಇದು ಒಳ್ಳೆಯ ಲಕ್ಷಣವಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡುವಂತೆ ನಾವು ವಿನಂತಿಸುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಷ್ಟವನ್ನು ಕೂಡ ಅಂದಾಜಿಸಿ ಎಲ್ಲ ನಿಗಮಗಳಿಗೆ ಮುಂಚಿತವಾಗಿ ಪರಿಹಾರ ನೀಡುವಂತೆಯೂ ಒಕ್ಕೂಟ ಸರ್ಕಾರವನ್ನು ಕೋರಿದೆ.

‘ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಜಾರಿಗೆ ತರುವುದಕ್ಕಾಗಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆಯನ್ನು ಸರಿಯಾಗಿ ಅಂದಾಜು ಮಾಡಲು ಮತ್ತು ನಿಗಮಗಳಿಗೆ ಮುಂಗಡವಾಗಿ ವೆಚ್ಚವನ್ನು ಮಂಜೂರು ಮಾಡುವಂತೆ ನಾವು ನಿಮ್ಮನ್ನು ಕೋರುತ್ತೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಮೇ 20ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಎಲ್ಲ ಐದು ಗ್ಯಾರಂಟಿಗಳನ್ನು ಎರಡನೇ ಸಂಪುಟ ಸಭೆಯ ನಂತರ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಂಪುಟ ವಿಸ್ತರಣೆ ಬಳಿಕ ಮುಂದಿನ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.

Join Whatsapp
Exit mobile version