Home ಟಾಪ್ ಸುದ್ದಿಗಳು ಒಂದೇ ಹೆಸರಿನ ಹಲವರು ಚುನಾವಣೆಗೆ ಸ್ಪರ್ಧೆ: ಅರ್ಜಿ ವಜಾಗೊಳಿಸಿದ ಸುಪ್ರೀಂ

ಒಂದೇ ಹೆಸರಿನ ಹಲವರು ಚುನಾವಣೆಗೆ ಸ್ಪರ್ಧೆ: ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಒಂದೇ ರೀತಿಯ ಹೆಸರಿನ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದರಿಂದ ಉದ್ಭವಿಸುವ ಸಮಸ್ಯೆಯನ್ನು ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸತೀಶ್ಚಂದ್ರ ಶರ್ಮ ಹಾಗೂ ಸಂದೀಪ್ ಮೆಹ್ತಾ ಅವರು ಇರುವ ಪೀಠ, ಮನವಿಯನ್ನು ವಾಪಸ್‌ ಪಡೆಯಲು ಅರ್ಜಿದಾರ ಸಾಬು ಸ್ವೀಫನ್‌ಗೆ ಅನುಮತಿ ನೀಡಿತು.

ರಾಹುಲ್‌ ಗಾಂಧಿ ಇಲ್ಲವೇ ಲಾಲು ಪ್ರಸಾದ್‌ ಎಂಬ ಹೆಸರನ್ನೇ ಹೊಂದಿರುವ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸದಂತೆ ಹೇಗೆ ತಡೆಯುತ್ತೀರಿ? ಈ ರೀತಿ ಮಾಡುವುದು ಅವರ ಹಕ್ಕನ್ನು ಮೊಟಕುಗೊಳಿಸಿದಂತೆ ಆಗುವುದಿಲ್ಲವೇ ಎಂದು ಅರ್ಜಿದಾರ ಪರ ಹಾಜರಿದ್ದ ವಕೀಲ ವಿ.ಕೆ.ಬಿಜು ಅವರನ್ನು ಪೀಠ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಬಿಜು, ಚುನಾವಣಾ ನಿರ್ವಹಣೆ ನಿಯಮಗಳ ನಿಯಮ 22(3) ಉಲ್ಲೇಖಿಸಿ, ಇದು ಬಹಳ ಗಂಭೀರವಾದ ವಿಷಯ ಎಂದು ಹೇಳಿದರು.

ಹೆಚ್ಚು ಜನ ಅಭ್ಯರ್ಥಿಗಳು ಒಂದೇ ರೀತಿಯ ಹೆಸರು ಹೊಂದಿದ್ದಲ್ಲಿ, ಅವರ ಹುದ್ದೆ ಅಥವಾ ವಾಸಸ್ಥಳ ಇಲ್ಲವೇ ಇದೇ ರೀತಿಯ ಇಂತಹ ಇತರ ಕ್ರಮ ಅನುಸರಿಸುವ ಮೂಲಕ ಅವರ ಗುರುತನ್ನು ಪ್ರತ್ಯೇಕಿಸಬೇಕು ಎಂಬುದಾಗಿ ಈ ನಿಯಮ ಹೇಳುತ್ತದೆ ಎಂದು ಅವರು ಪೀಠಕ್ಕೆ ತಿಳಿಸಿದರು.

ಹಾಗಾದರೆ, ಬರುವ ದಿನಗಳಲ್ಲಿ ಈ ಪ್ರಕರಣದಿಂದಾಗುವ ಪರಿಣಾಮ ಏನಾಗಲಿದೆ ಎಂಬುದು ನಿಮಗೆ ಗೊತ್ತೇ ಎಂದು ಅರ್ಜಿದಾಋ ಪರ ವಕೀಲರಿಗೆ ಪೀಠ ಪ್ರಶ್ನಿಸಿದೆ.

Join Whatsapp
Exit mobile version