Home ಟಾಪ್ ಸುದ್ದಿಗಳು ಕೆಪಿಟಿಸಿಎಲ್ ಜೆಇ ಪರೀಕ್ಷೆ ಅಕ್ರಮ: ಕಿಂಗ್ ಪಿನ್ ಬಂಧನ: 13ಕ್ಕೇರಿದ ಬಂಧಿತರ ಸಂಖ್ಯೆ

ಕೆಪಿಟಿಸಿಎಲ್ ಜೆಇ ಪರೀಕ್ಷೆ ಅಕ್ರಮ: ಕಿಂಗ್ ಪಿನ್ ಬಂಧನ: 13ಕ್ಕೇರಿದ ಬಂಧಿತರ ಸಂಖ್ಯೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಪಿಟಿಸಿಎಲ್ ಕಿರಿಯ ಅಭಿಯಂತರ (ಜೆಇ)ಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕಿಂಗ್ ಪಿನ್ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪರೀಕ್ಷೆಯ ಅಕ್ರಮದ ಕಿಂಗ್ ಪಿನ್ ಎಂದೇ ಕರೆಯಲಾಗುತ್ತಿದ್ದ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಜೀವ ಲಕ್ಷ್ನಣ ಭಂಡಾರಿ ಬಂಧಿತ ಆರೋಪಿಯಾಗಿದ್ದು, ಈತನ ಬಂಧನದಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೇರಿದೆ.

ಬಂಧಿತ ಆರೋಪಿಯನ್ನು ಪೊಲೀಸರು ಗೋಕಾಕ್ ನ ಪ್ರಿನ್ಸಿಪಲ್ ಜೆಎಂಎಫ್ ಸಿಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7 ದಿನಗಳ ವರೆಗೆ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಕಳೆದ ಆ.7ರಂದು ಕೆಪಿಟಿಸಿಎಲ್ ನ ಕಿರಿಯ ಅಭಿಯಂತರ (ಜೆಇ) ನೇಮಕಾತಿ ಪರೀಕ್ಷೆ ಸಮಯದಲ್ಲಿ ಗೋಕಾಕ್ ನಗರದ ಜೆಎಸ್ ಎಸ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್ ವಾಚ್ ನ ಕ್ಯಾಮೆರಾ ಮೂಲಕ ಪ್ರಶ್ನೆ ಪತ್ರಿಕೆಯನ್ನು ಫೋಟೋ ತೆಗೆದು ಟೆಲಿಗ್ರಾಂ ಮೂಲಕ ಪ್ರಮುಖ ಆರೋಪಿ ಸಂಜೀವ ಭಂಡಾರಿಗೆ ರವಾನಿಸಿದ್ದನು.

ಈ ಅಕ್ರಮದ ಕುರಿತು ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಂಜೀವ ಭಂಡಾರಿ ತಲೆಮರೆಸಿಕೊಂಡಿದ್ದನು. ಅಲ್ಲದೇ ವಕೀಲರ ಮೂಲಕ ಎರಡು ಬಾರಿ ಜಾಮೀನಿಗಾಗಿ ಭಂಡಾರಿ ಅರ್ಜಿ ಸಲ್ಲಿಸಿದ್ದನು. ಆದರೆ, ನ್ಯಾಯಾಲಯ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿತು.

ಇತ್ತ, ಆರೋಪಿ ಸಂಜೀವ ಭಂಡಾರಿ ಪರೀಕ್ಷಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬ್ಲೂಟೂತ್ ಡಿವೈಸ್ ಗಳನ್ನು ರವಾನಿಸುತ್ತಿದ್ದ. ಈಗ ಪೊಲೀಸರು ಬ್ಲೂಟೂತ್ ಡಿವೈಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಂಜೀವ ಪೊಲೀಸ್ ಕಾನ್ಸ್ ಟೇಬಲ್ ಮಗನಾಗಿದ್ದು, ಈ ಹಿಂದೆ ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಅಕ್ರಮದಲ್ಲೂ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದ ಎಂದು ತಿಳಿದುಬಂದಿದೆ.

Join Whatsapp
Exit mobile version