Home ಟಾಪ್ ಸುದ್ದಿಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ: ಗಣ್ಯರ ಸಂತಾಪ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ: ಗಣ್ಯರ ಸಂತಾಪ

ಬೆಂಗಳೂರು: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ನಿಧನಕ್ಕೆ ಮುಖ್ಯಮಂತ್ರಿ, ವಿಪಕ್ಷ ನಾಯಕ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಮಾಜಿ ಸಂಸದರು ಹಾಗೂ ಕೆ.ಪಿ.ಸಿ.ಸಿ.ಯ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್ ಅವರು ನಿಧನರಾದ ವಿಷಯ ಅತ್ಯಂತ ಬೇಸರ ಉಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಹಾಗೂ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಂತಾಪ ಸೂಚಿಸಿದ್ದಾರೆ.


ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ. ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ಸಂತಾಪ ಸೂಚಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಧ್ರುವ ನಾರಾಯಣ ಅವರ ದಿಢೀರ್ ಸಾವಿನಿಂದ ತೀವ್ರ ಆಘಾತಗೊಂಡಿದ್ದೇನೆ. ವೈಯಕ್ತಿಕವಾಗಿ ಆತ್ಮೀಯರಾಗಿದ್ದ ಅವರು ಕಠಿಣ ನಿರ್ಧಾರ ಕೈಗೊಳ್ಳುವಾಗ ಅತ್ಯುತ್ತಮ ಸಲಹೆ ನೀಡುತ್ತಿದ್ದರು. ಯಾರ ಮನಸ್ಸನ್ನೂ ನೋವಿಸದೆ ಸದಾ ಹಸನ್ಮುಖರಾಗಿದ್ದ ವ್ಯಕ್ತಿತ್ವ ಅವರದ್ದು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.


ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ. ಅತ್ಯಂತ ಸ್ನೇಹಶೀಲ ವ್ಯಕ್ತಿಯಾಗಿದ್ದ ಅವರು ವಿಭಿನ್ನ ರಾಜಕಾರಣಿ ಆಗಿದ್ದರು. ಸೋಲುಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಅವರು ಮತ್ತೊಬ್ಬರಿಗೆ ಮಾದರಿ ಆಗಿದ್ದರಲ್ಲದೆ, ಶಾಸಕರಾಗಿ, ಲೋಕಸಭೆ ಸದಸ್ಯರಾಗಿ ರಾಜ್ಯಕ್ಕೆ ಎಣೆ ಇಲ್ಲದ ಸೇವೆ ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಆರ್.ಧ್ರುವನಾರಾಯಣ ಅವರ ಅಗಲಿಕೆ ನಮ್ಮ ರಾಜ್ಯಕ್ಕೆ ಭರಿಸಲಾಗದ ನಷ್ಟ. ಅವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಟ್ವೀಟ್ ಮಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ನನಗೆ ಬಹಳ ಆತ್ಮೀಯರೂ ಆದ ಧ್ರುವ ನಾರಾಯಣ ರವರ ನಿಧನದ ಸುದ್ದಿ ಮನಸ್ಸಿಗೆ ಬಹಳ ಆಘಾತ ತಂದಿದೆ. ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಾ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ,ಕುಟುಂಬಸ್ಥರಿಗೆ ಅಭಿಮಾನಿಗಳಿಗೆ,ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಪಕ್ಷ, ಸಂಘಟನೆ, ತತ್ವ, ಸಿದ್ದಾಂತವನ್ನೇ ತನ್ನ ಬದುಕಾಗಿಸಿಕೊಂಡಿದ್ದ, ಸರಳ ಸಜ್ಜನಿಕೆಯ ರಾಜಕಾರಣಿ ಬಹುಕಾಲದ ನನ್ನ ಒಡನಾಡಿಯಾಗಿದ್ದ ಮಾಜಿ ಸಂಸದರಾದ ಧೃವ ನಾರಾಯಣ ಅವರ ಅಗಲಿಕೆ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಷ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡು ಬಡವಾಯಿತು. ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version