Home ಟಾಪ್ ಸುದ್ದಿಗಳು ಕೋಟೆಕಾರು ಬ್ಯಾಂಕ್ ದರೋಡೆ: ತನಿಖೆಯ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಪ್ಲಾನ್ ಹೇಗಿತ್ತು ಗೊತ್ತಾ?

ಕೋಟೆಕಾರು ಬ್ಯಾಂಕ್ ದರೋಡೆ: ತನಿಖೆಯ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಪ್ಲಾನ್ ಹೇಗಿತ್ತು ಗೊತ್ತಾ?

ತೊಕ್ಕೊಟ್ಟು: ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖಾ ಕಚೇರಿಗೆ ನುಗ್ಗಿದ ನಾಲ್ವರು ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ಕೋಟ್ಯಂತರ ರೂ. ಮೌಲ್ಯದ ನಗ-ನಗದು ದೋಚಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದ ಸಂದರ್ಭ ನೋಡಿಯೇ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಖತರ್ನಾಕ್ ಪ್ಲಾನ್ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.


ಪೊಲೀಸರನ್ನು ಗೊಂದಲಕ್ಕಿಡು ಮಾಡುವುದಕ್ಕಾಗಿಯೇ ದರೋಡೆಕೋರರು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಬೇರ್ಪಟ್ಟಿದ್ದಾರೆ.


ಅಷ್ಟೇ ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದೆ. ದರೋಡೆಕೋರರು ಮಂಗಳೂರು-ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ.


ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ಸಹಕಾರ ಸಂಘದ ಶಾಖಾ ಕಚೇರಿಗೆ ನುಗ್ಗಿದ ನಾಲ್ವರು ಮಾಸ್ಕ್ಧಾರಿಗಳು ಬ್ಯಾಂಕ್ ನಲ್ಲಿದ್ದ ಐವರು ಸಿಬ್ಬಂದಿಗೆ ಬಂದೂಕು, ತಲವಾರು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಬ್ಯಾಂಕ್ ಮ್ಯಾನೇಜರ್ ರನ್ನು ಬೆದರಿಸಿ, ಸ್ಟ್ರಾಂಗ್ ರೂಂನ ಕೀ ಪಡೆದು ಸುಮಾರು 4 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಚಿನ್ನಾಭರಣ, ಸುಮಾರು 13 ಲಕ್ಷ ರೂ. ನಗದು ಲೂಟಿ ಮಾಡಿದ್ದಾರೆ. ಅಲ್ಲದೆ ಬ್ಯಾಂಕ್ ನ ಪ್ರಿಂಟರ್, ಸಿಬ್ಬಂದಿಯ ಮೊಬೈಲ್ ಫೋನ್ ಹಾನಿಗೊಳಿಸಿದ್ದಾರೆ.


ಕೋಟೆಕಾರಿನಲ್ಲಿ ನಡೆದ ದರೋಡೆ ಕೃತ್ಯದ ತನಿಖೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿಆರೋಪಿಗಳ ಬಗ್ಗೆ ಕೆಲವೊಂದು ಸೂಕ್ಷ್ಮ ಮಾಹಿತಿ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Join Whatsapp
Exit mobile version