Home ಟಾಪ್ ಸುದ್ದಿಗಳು ಮಮತಾರನ್ನು ಆರೋಪಿ ಸ್ಥಾನದಲ್ಲಿ ಕೂರಿಸಲು ಅಮಾಯಕರನ್ನು ಕೊಂದು ಹಾಕಿತೇ ಕೇಂದ್ರ ಪಡೆ CISF ?

ಮಮತಾರನ್ನು ಆರೋಪಿ ಸ್ಥಾನದಲ್ಲಿ ಕೂರಿಸಲು ಅಮಾಯಕರನ್ನು ಕೊಂದು ಹಾಕಿತೇ ಕೇಂದ್ರ ಪಡೆ CISF ?

►ಕೂಚ್ ಬಿಹಾರ್ CISF ಗುಂಡು ಹಾರಾಟದ ವೀಡಿಯೋ ವೈರಲ್ !

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣಾ ಕಣದ ವೇಳೆ ಕೂಚ್ ಬಿಹಾರಿನ ಸೀತಾಲ್ಕೂಚಿಯಲ್ಲಿ ಗುಂಪೊಂದು ಮತಗಟ್ಟೆಯ ಮೇಲೆ ದಾಳಿ ಮಾಡಲು ಬಂದಿತ್ತು. ಅವರನ್ನು ನಿಗ್ರಹಿಸಲು  ನಾಲ್ಕು ಜನರ ಮೇಲೆ ಗುಂಡು ಹಾರಿಸಲಾಯಿತು ಎಂದು ಕೇಂದ್ರ CISF ಪಡೆಗಳು ಹೇಳಿಕೆ ನೀಡಿದ್ದವು. ಆದರೆ ಇದೀಗ ಅದೇ ಮತಗಟ್ಟೆ ಪ್ರದೇಶದ್ದು ಎನ್ನಲಾದ ವೀಡಿಯೋ ಒಂದು ವೈರಲ್ ಆಗಿದ್ದು, ಕೇಂದ್ರ ಪಡೆಗಳ ನಡೆಯ ಕುರಿತೇ ಸಂಶಯವೆದ್ದಿದೆ.

ಈ ವೀಡಿಯೋವನ್ನು ಇಂಡಿಯಾ ಟುಡೇಯ ಇಂದ್ರಜಿತ್ ಕುಂಡು ಅವರು ಟ್ವೀಟ್ ಮಾಡಿದ್ದಾರೆ.  ಕೂಚ್ ಬಿಹಾರಿನಲ್ಲಿ ಮತದಾನದ ದಿನದಂದು ಏನಾಯಿತು ಎಂದು ತೋರಿಸುವ ಹೊಸ ವೀಡಿಯೋ ವೈರಲ್ ಆಗಿದೆ ಎಂದು ಬರೆದಿದ್ದಾರೆ.

ಅದೇ ರೀತಿ ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕ ಡೆರಿಕ್ ಓಬ್ರಿಯಾನ್ ಟ್ವೀಟ್ ಮಾಡಿ, “ಏನನ್ನು ಮುಚ್ಚಿ ಹಾಕಬೇಕೆಂದು ಬಯಸಿದ್ದರೋ ಅದೀಗ ಬಹಿರಂಗವಾಗಿದೆ. 11 ನಿಮಿಷಗಳ ಈ ವೀಡಿಯೋದಲ್ಲಿ ಎಲ್ಲವೂ ಬಯಲಾಗಿದೆ. ಸೊಂಟದ ಕೆಳಗೆ ಶೂಟ್ ಮಾಡಬೇಕಾಗಿದ್ದ ಕೇಂದ್ರ ಪಡೆಗಳು ಅವರನ್ನು ಕೊಂದಿದ್ದೇಕೆ ? ಈ ಪ್ರಶ್ನೆ ಮತ್ತು ಹಲವಾರು  ಪ್ರಶ್ನೆಗಳಿಗೆ ಮೋದಿ, ಅಮಿತ್ ಶಾ ಮತ್ತು ಚುನಾವಣಾ ಆಯೋಗ ಉತ್ತರಿಸಬೇಕಾಗಿದೆ. ಸತ್ಯ ಗೆಲ್ಲುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಬಝಾರ್ ಪತ್ರಿಕೆ ಕೂಡಾ 11 ನಿಮಿಷಗಳ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು, ಆ ವೀಡಿಯೋದಲ್ಲಿ ಕೇಂದ್ರ ಪಡೆಗಳು ಆರೋಪಿಸಿರುವಂತೆ ಮತಗಟ್ಟೆ ವಶ ಅಥವಾ ಕೇಂದ್ರ ಪಡೆಗಳ ಮೇಲಿನ ದಾಳಿ ಯಾವುದೂ ಕಾಣಿಸುತ್ತಿಲ್ಲ. ದೊಣ್ಣೆಗಳನ್ನು ಹಿಡಿದುಕೊಂಡು ಕೆಲವರು ಅಲ್ಲಿದ್ದಾರಾದರೂ ಅವರು ಯಾರೂ ಕೇಂದ್ರ ಪಡೆಗಳ ಮೇಲೆ ದಾಳಿ ನಡೆಸಿರಲಿಲ್ಲ. ಆದರೆ ಪಡೆಗಳು ಗುಂಡು ಹಾರಿಸಿದ ಬಳಿಕ ಸ್ಥಳೀಯರು ಕೇಂದ್ರ ಪಡೆಯನ್ನುಬೆನ್ನಟ್ಟುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಮಮತಾರನ್ನು ಆರೋಪಿ ಸ್ಥಾನದಲ್ಲಿ ಕೂರಿಸಲು ಅಮಾಯಕರ ಮಾರಣಹೋಮ ನಡೆಯಿತೇ?

ಈ ಘಟನೆ ನಡೆಯುವುದಕ್ಕಿಂತ ಕೆಲ ದಿನಗಳ ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣೆಗಳಲ್ಲಿ ಅಕ್ರಮ ನಡೆಯುವುದು ಕಂಡು ಬಂದರೆ ಕೇಂದ್ರ ಪಡೆಗಳ ಮೇಲೆ ಘೇರಾವ್ ಹಾಕಿ ಅವರನ್ನು ಗುರಿಪಡಿಸಿ ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದರು. ಅದಾದ ಬಳಿಕ ಕೂಚ್ ಬಿಹಾರಿನಲ್ಲಿ ಕೇಂದ್ರ ಪಡೆ ಗುಂಡಿತ್ತು ನಾಲ್ವರನ್ನು ಕೊಂದು ಹಾಕಿತ್ತು. ಘಟನೆಯ ಬಳಿಕ ಮೋದಿ,  ಗೃಹ ಸಚಿವ ಅಮಿತ್ ಶಾ ಅವರು,  ಮಮತಾ ತನ್ನ ಕಾರ್ಯಕರ್ತರನ್ನು ಪ್ರಚೋದಿಸಿದ್ದರಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿಕೆ ನೀಡಿ ಮಮತಾರನ್ನು ಗುರಿಪಡಿಸಿ ದಾಳಿ ಮಾಡಿದ್ದರು. ಇದೀಗ ವೈರಲ್ ಆಗಿರುವ ವೀಡಿಯೋಗಳನ್ನು ನೋಡುತ್ತಿದ್ದರೆ, ಮಮತಾ ಅವರ ಕೇಂದ್ರ ಪಡೆಗಳ ವಿರುದ್ಧ ಹೇಳಿಕೆಯ ಲಾಭ ಪಡೆಯಲು  CISF ಅಮಾಯಕರನ್ನು ಗುಂಡಿಟ್ಟು ಕೊಂದು ಹಾಕಿತೇ ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ.  ಹಾಗಾದರೆ ಅವರಿಗೆ ಈ ರೀತಿಯ ಆದೇಶ ನೀಡಿದವರು ಯಾರು ಎಂಬ ಪ್ರಶ್ನೆ ಕೂಡಾ ಏಳುತ್ತದೆ. ಸೂಕ್ತ ತನಿಖೆಗಳು ಮಾತ್ರ ಪ್ರಕರಣದ ಹಿಂದಿರುವ ಷಡ್ಯಂತ್ರಗಳನ್ನು ಬಯಲಿಗೆಳೆಯಲು ಸಾಧ್ಯ.

Join Whatsapp
Exit mobile version