Home ಕ್ರೀಡೆ ಕೊಹ್ಲಿ, ರೋಹಿತ್ ಶರ್ಮಾಗೆ ವಿಶ್ರಾಂತಿ: ರಾಹುಲ್’ಗೆ ಸಾರಥ್ಯ?

ಕೊಹ್ಲಿ, ರೋಹಿತ್ ಶರ್ಮಾಗೆ ವಿಶ್ರಾಂತಿ: ರಾಹುಲ್’ಗೆ ಸಾರಥ್ಯ?

ನವದೆಹಲಿ: ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ-20 ಹಾಗೂ ಟೆಸ್ಟ್ ಸರಣಿಯನ್ನಾಡಲಿದೆ. ಬಯೋ ಬಬಲ್ ವ್ಯವಸ್ಥೆಯಡಿಯಲ್ಲಿ ಕಳೆದ 6 ತಿಂಗಳಿನಿಂದಲೂ ಕುಟುಂಬದಿಂದ ದೂರವಿರುವ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ.


ಮೂಲಗಳ ಪ್ರಕಾರ ವಿರಾಟ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕನ್ನಡಿಗ ಕೆ ಎಲ್ ರಾಹುಲ್ ಹೆಗಲೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಆಯ್ಯರ್ ಹಾಗೂ ಹರ್ಷಲ್ ಪಟೇಲ್ ಅಥವಾ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.


ಭಾರತ ಪ್ರವಾಸ ಕೈಗೊಳ್ಳುತ್ತಿರುವ ನ್ಯೂಜಿಲೆಂಡ್ 3 ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದೆ. ಟಿ-ಸರಣಿಯ ಮೊದಲ ಪಂದ್ಯ ನವೆಂಬರ್ 17ರಂದು ಜೈಪುರ, 2ನೇ ಪಂದ್ಯ ನ.19ರಂದು ರಾಂಚಿ ಹಾಗೂ ಕೊನೇಯ ಪಂದ್ಯ ನ.21ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಬಳಿಕ ನ.25-29ರವರೆಗೆ ಮೊದಲ ಟೆಸ್ಟ್ ಪಂದ್ಯ ಕಾನ್ಪುರ ಹಾಗೂ ಡಿಸೆಂಬರ್ 3-7ರವರೆಗೆ ಎರಡನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.


ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳನ್ನು ಅಭಿಮಾನಿಗಳು ಮೈದಾನದಲ್ಲಿಯೇ ಬಂದು ವೀಕ್ಷಿಸಲು ಅನುಕೂಲವಾಗುವಂತೆ ಬಿಸಿಸಿಐ ಆಲೋಚಿಸುತ್ತಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಶೇ.50ರಷ್ಟು ಆಸನ ಸಾಮರ್ಥ್ಯದಲ್ಲಿ ಪಂದ್ಯ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

Join Whatsapp
Exit mobile version