Home Uncategorized ಕೊಡಗು: ಬಗೆ ಹರಿಯದ ಕ್ರಿಕೆಟ್ ಸ್ಟೇಡಿಯಂ ವಿವಾದ, ಹೋರಾಟಗಾರರ ಬಂಧನ

ಕೊಡಗು: ಬಗೆ ಹರಿಯದ ಕ್ರಿಕೆಟ್ ಸ್ಟೇಡಿಯಂ ವಿವಾದ, ಹೋರಾಟಗಾರರ ಬಂಧನ

ಮಡಿಕೇರಿ: ಐದು ತಿಂಗಳ ಹಿಂದೆ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಂಡಿದ್ದ ಕ್ರಿಕೆಟ್ ಸ್ಟೇಡಿಯಂ ವಿವಾದ ಮತ್ತೊಮ್ಮೆ ಜೀವ ಪಡೆದುಕೊಂಡಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆ.ಎಸ್.ಸಿ.ಎ) ಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕೊಡಗು ಜಿಲ್ಲಾಡಳಿತ
ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಜಾಗ ಗುರುತಿಸಿ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಪರಿಶಿಷ್ಟ ಜಾತಿ – ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನ ಜಾಗವು ಒಳಗೊಂಡಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಕಳೆದ 5 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. 2021 ರ ಡಿಸೆಂಬರ್ ನಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಬಿ.ಸಿ‌ ಸತೀಶ ಅವರು ಹೋರಾಟಗಾರರ ಹಾಗೂ ಕೆ.ಎಸ್.ಸಿ.ಎ ಪ್ರಮುಖರ ಜೊತೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚೆ ಮಾಡಿದ ಬಳಿಕ ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿಂದ ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು. ಬಳಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳು ಪ್ರಾರಂಭವಾಗಿತ್ತು.

ಸೋಮವಾರ ಎ.ಸಿ ಅವರನ್ನೊಳಗೊಂಡ ತಂಡ ಪೊಲೀಸರ ಜೊತೆಗೆ ಜೆಸಿಬಿ ಮೂಲಕ ಆಗಮಿಸಿ, ಕಾಮಗಾರಿಗೆ ಮುಂದಾದ ಸಂದರ್ಭ ಹೋರಾಟಗಾರರು ಪ್ರತಿಭಟಿಸಿದರು. ಈ ಸಂದರ್ಭ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಭರವಸೆ ನೀಡಿದ ತಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಜಿಲ್ಲಾಡಳಿತ ನಮಗೆ ಮೋಸ ಮಾಡಿದೆ ಎಂದು ಹೋರಾಟಗಾರರು ಆರೋಪಿಸಿದರು. ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ, ಹೋರಾಟಗಾರ ಮೊನ್ನಪ್ಪ ಸೇರಿದಂತೆ ಹಲವರನ್ನು ಬಂಧಿಸಿ ಮಡಿಕೇರಿಗೆ ಕರೆದೊಯ್ಯಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Join Whatsapp
Exit mobile version