ಬೆಂಗಳೂರು: ಕೆಜಿಎಫ್ ಸಂಗೀತ ಬಳಕೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಹ್ಯಾಂಡಲ್ ಗಳನ್ನು ನಿರ್ಬಂಧಿಸಿದ ಬೆಂಗಳೂರು ನ್ಯಾಯಾಲಯದ ಆದೇಶದ ವಿರುದ್ಧ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ಜಿ. ನರೇಂದರ್ ಮತ್ತು ಪಿ.ಎನ್. ದೇಸಾಯಿ ಅವರನ್ನೊಳಗೊಂಡ ಪೀಠವು ಶೀಘ್ರದಲ್ಲೇ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಕೆಜಿಎಫ್-2 ಸಿನಿಮಾದ ಮುದ್ರಿತ ಸಂಗೀತವನ್ನು ಟ್ವಿಟರ್ ಖಾತೆಯಲ್ಲಿ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ MRT ಮ್ಯೂಸಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ ಜೋಡೋ ಯಾತ್ರೆಯ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್ ಗೆ ಸೋಮವಾರ ಆದೇಶಿಸಿತ್ತು.