Home ಟಾಪ್ ಸುದ್ದಿಗಳು ಕೇರಳ: ಶರೋನ್ ರಾಜ್ ಕೊಲೆ ಪ್ರಕರಣ; ಗೆಳತಿ ಗ್ರೀಷ್ಮಾಗೆ ಮರಣದಂಡನೆ

ಕೇರಳ: ಶರೋನ್ ರಾಜ್ ಕೊಲೆ ಪ್ರಕರಣ; ಗೆಳತಿ ಗ್ರೀಷ್ಮಾಗೆ ಮರಣದಂಡನೆ

ತಿರುವನಂತಪುರ: 2022ರಲ್ಲಿ ತನ್ನ ಬಾಯ್‌ ಫ್ರೆಂಡ್ ಅನ್ನು ಕೊಂದಿದ್ದ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಕೇರಳ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಶರೋನ್ ರಾಜ್(23)ನನ್ನು ಕೀಟನಾಶಕ ಬೆರೆಸಿದ ಆಯುರ್ವೇದ ಕಷಾಯ ನೀಡಿ ಗ್ರೀಷ್ಮಾ ಕೊಲೆ ಮಾಡಿದ್ದಳು. ಪ್ರಕರಣದ ಮೂರನೇ ಆರೋಪಿ ಗ್ರೀಷ್ಮಾ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣದಲ್ಲಿ 2ನೇ ಆರೋಪಿ ಎಂದು ಹೇಳಲಾದ ಗ್ರೀಷ್ಮಾ ತಾಯಿ ಸಿಂಧುವನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.

ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ನಮ್ಮ ಪೋಷಕರಿಗೆ ಒಬ್ಬಳೇ ಮಗಳಾಗಿರುವೆ ಹಾಗೂ ನನ್ನ ಅಕಾಡೆಮಿ ಸಾಧನೆಗಳನ್ನು ಪರಿಗಣಿಸಿ ಶಿಕ್ಷೆ ಪ್ರಮಾಣದಲ್ಲಿ ವಿನಾಯಿತಿ ನೀಡುವಂತೆ ಹತ್ಯೆ ಪ್ರಕರಣದ ಅಪರಾಧಿ 24 ವರ್ಷದ ಗ್ರೀಷ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ನಡೆದಿರುವ ಅಪರಾಧದಲ್ಲಿ ಶಿಕ್ಷೆ ನೀಡುವಾಗ ಅಪರಾಧಿಯ ವಯಸ್ಸು ಮತ್ತು ಇನ್ನಿತರ ಯಾವುದೇ ಅಂಶಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು 586 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

ಅಪರಾಧಿ ಮಹಿಳೆಯು ಹಂತ ಹಂತವಾಗಿ ಅಪರಾಧ ನಡೆಸಲು ಸಂಚು ರೂಪಿಸಿದ್ದನ್ನು ನ್ಯಾಯಾಲಯ ಗಮನಿಸಿದೆ. ಆಕೆ ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು. ಇದಕ್ಕೂ ಮೊದಲೇ ಯುವಕನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು. ತನಿಖೆಯ ಹಾದಿ ತಪ್ಪಿಸಲು ಬಂಧನದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ನ್ಯಾಯಾಲಯ ಹೇಳಿದೆ.

ಪ್ರಾಸಿಕ್ಯೂಷನ್ ಪ್ರಕಾರ, 2022ರ ಅಕ್ಟೋಬರ್ 14ರಂದು ರಾಜ್ ಅವರನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಾಂಚಿರೈನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ,ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಬಳಿಕ, ಶರಾನ್‌ ಗೆ ಬಹುಅಂಗಾಂಗ ವೈಫಲ್ಯ ಉಂಟಾಗಿತ್ತು. 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ, ಅಕ್ಟೋಬರ್ 25ರಂದು ಮೃತಪಟ್ಟಿದ್ದ.

ಗ್ರೀಷ್ಮಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ರಾಜ್ ತಮ್ಮ ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದಾಗ ಗ್ರೀಷ್ಮಾ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಹತ್ಯೆಗೀಡಾದ ಶರಾನ್ ತಾಯಿ ಪ್ರಿಯಾ, ಇಂತಹ ಅನುಕರಣೀಯ ತೀರ್ಪು ಪ್ರಕಟಿಸಿದ ನ್ಯಾಯಾಲಯಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದ್ದಾರೆ.

Join Whatsapp
Exit mobile version