ತಿರುವನಂತಪುರಂ: ಕೋವಿಡ್-19 ಸೋಂಕಿನ ನಿಯಂತ್ರಣಕ್ಕಾಗಿ ಘೋಷಿಸಿದ ಎರಡನೇ ಲಾಕ್ ಡೌನ್ ನ ಬಿಕ್ಕಟ್ಟನ್ನು ಎದುರಿಸಲು ಕೇರಳ ಸರಕಾರವು ಮಂಡಿಸಿದ ಬಜೆಟ್‌ನಲ್ಲಿ 20ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ.
ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಬಜೆಟ್ ಅನ್ನು ಇಂದು ಮಂಡಿಸಿದರು. ಇದರಲ್ಲಿ ಕೋವಿಡ್ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಅನ್ನು ಪ್ರಕಟಿಸಲಾಗಿದೆ.
ಕೇರಳ ಸರ್ಕಾರ ಘೋಷಿಸಿದ ಬಜೆಟ್‌ನ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
• ₹20,000 ಕೋಟಿಕೋವಿಡ್ ಎರಡನೇ ಅಲೆ ಎದುರಿಸಲು ವಿಶೇಷಪ್ಯಾಕೇಜ್
• ತೆರಿಗೆ ರವಾನೆ ಖಚಿತಪಡಿಸಿಕೊಳ್ಳಲು ಯಾವುದೇ ಬಲವಂತದ ಕ್ರಮಗಳಿಲ್ಲ
• ಅನಾಥಮಕ್ಕಳಿಗೆ 18 ನೇವಯಸ್ಸನ್ನುತಲುಪುವವರೆಗೆ ಮಾಸಿಕವಾಗಿ ₹2,000 ಸಹಾಯಧನ.ಜೊತೆಗೆ ಒಮ್ಮೆಲೆ ₹3 ಲಕ್ಷ ಪಾವತಿ.
• ಕೋವಿಡ್ ಮತ್ತು ಎಲಬೊಲದಂತಹ ಸಾಂಕ್ರಾಮಿಕ ರೋಗ ತಡೆಗಟ್ಟಲು ಚಿಕಿತ್ಸೆಗಾಗಿ ತಿರುವನಂಪುರ ಮತ್ತು ಕ್ಯಾಲಿಕಟ್ ನಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆ
• ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿ ಮೂಲಕ ರಾಜ್ಯದಲ್ಲಿ ಲಸಿಕೆ ಸಂಶೋಧನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಕ್ರಮ.
• ರೋಗ ನಿಯಂತ್ರಣ ಕೇಂದ್ರಕ್ಕೆ ₹ 50 ಲಕ್ಷ ಹಂಚಿಕೆ
18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ₹ 1 ಸಾವಿರ ಕೋಟಿ ವಿಶೇಷ ನಿಧಿಯನ್ನು ತೆಗೆದಿರಿಸಿದ್ದಾರೆ. ಹಾಗೆಯೇ ಉಚಿತ ಲಸಿಕೆ ನೀಡಲು ಬೇಕಾದ ಉಪಕರಣಗಳು ಮತ್ತು ಸೌಲಭ್ಯಗಳಿಗಾಗಿ ಹೆಚ್ಚುವರಿಯಾಗಿ ₹500 ಕೋಟಿ ಹಣವನ್ನು ಮೀಸಲಿರಿಸಲಾಗಿದೆ ಸಚಿವರು ತಿಳಿಸಿದ್ದಾರೆ.
‘ಕೋವಿಡ್ ಪರಿಹಾರ ಕಾರ್ಯಗಳಿಗೆ ಹಿಂದಿನ ಸರ್ಕಾರ ತೆಗೆದಿಟ್ಟಿದ್ದ ₹20 ಸಾವಿರ ಕೋಟಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ ಎಂದು ತಿಳಿಸಿದ ಹಣಕಾಸು ಸಚಿವರು, ‘ಕೋವಿಡ್-19 ಎರಡನೇ ಅಲೆಯ ಬಿಕ್ಕಟ್ಟನ್ನು ಎದುರಿಸಲು ಮತ್ತೆ ₹20 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆʼ ಎಂದು ಹೇಳಿದ್ದಾರೆ.
ನೂತನ ಬಜೆಟ್‌ಲ್ಲಿ ಆರೋಗ್ಯ ಮತ್ತು ಆಹಾರ ಭದ್ರತೆಗೆ ಒತ್ತು ನೀಡಲಾಗಿದೆ ಎಂದು ಹೇಳಿದ ಸಚಿವರು, ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.