ತಿರುವನಂತಪುರ: ಸೋಲಾರ್ ಪ್ಯಾನಲ್ ಪ್ರಕರಣದ ಆರೋಪಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯದ ದೂರಿನ ಆಧಾರದಲ್ಲಿ ಕೇರಳದ ಹಿರಿಯ ರಾಜಕಾರಣಿ, ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸದ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್ 354 ಎ ಪ್ರಕರಣ ಅಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿವೆ.
ಫೆಬ್ರವರಿ 10 ರಂದು ಪಿಸಿ ಜಾರ್ಜ್ ಅವರು ತನ್ನನ್ನು ತೈಕಾಡ್’ನಲ್ಲಿರುವ ಅತಿಥಿ ಗೃಹಕ್ಕೆ ಆಹ್ವಾನಿಸಿ ಅಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಘಟನೆಯ ಬಳಿಕ ಹಲವು ಬಾರಿ ಈ ರಾಜಕಾರಣಿಯಿಂದ ಅಶ್ಲೀಲ ಸಂದೇಶಗಳನ್ನು ಸ್ವೀಕರಿಸಿರುವುದಾಗಿಯೂ ಅವರು ಆರೋಪಿಸಿದ್ದಾರೆ.
ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆರೋಪಕ್ಕೆ ಸಂಬಂಧಿಸಿದಂತೆ ಪಿ.ಸಿ. ಜಾರ್ಜ್ ಅವರನ್ನು ಗೆಸ್ಟ್ ಹೌಸ್’ನಿಂದ ಕಂಟೋನ್ಮೆಂಟ್ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು, ಕ್ರೈಮ್ ಬ್ರಾಂಚ್ ವಿಚಾರಣೆ ನಡೆಸುತ್ತಿದೆ.
ಈ ನಡುವೆ ಲೈಂಗಿಕ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದೆಂಬ ನಿಯಮವನ್ನು ಉಲ್ಲಂಘಿಸಿದ್ದ ಪಿ ಸಿ ಜಾರ್ಜ್ ನಡೆಯನ್ನು ಮಹಿಳಾ ಪತ್ರಕರ್ತೆಯೊಬ್ಬರು ನೇರವಾಗಿ ಅವರಲ್ಲಿ ಪ್ರಶ್ನಿಸಿದಾಗ, ಹಾಗಾದರೆ ನಾನು ತಮ್ಮ ಹೆಸರನ್ನು ಹೇಳುತ್ತೇನೆ ಎಂದು ಉದ್ಧಟತನದಿಂದ ಪ್ರತಿಕ್ರಿಯಿಸಿದ ಘಟನೆಯೂ ನಡೆಯಿತು. ಆದರೆ ಅಲ್ಲಿ ನೆರೆದಿದ್ದ ಎಲ್ಲಾ ಪತ್ರಕರ್ತರು ಇದಕ್ಕಾಗಿ ಪಿ ಸಿ ಜಾರ್ಜ್ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.