ತಿರುವನಂತಪುರ: ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ಬುಧವಾರ ರಾಜೀನಾಮೆ ನೀಡಿದ್ದಾರೆ.
ಸಿಪಿಐಎಂ ನಾಯಕ ಸಾಜಿ ಚೆರಿಯನ್ ಅವರು, ಸಂವಿಧಾನದ ಗುರಿ ಶ್ರೀಸಾಮಾನ್ಯರನ್ನು ಶೋಷಣೆ ಮಾಡುವುದಾಗಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದರು. ಈ ಹಿನ್ನೆಲೆ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರು, ಚೆರಿಯನ್ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಸಿಪಿಐಎಂ ಕೇಂದ್ರ ನಾಯಕತ್ವ ಮಧ್ಯಪ್ರವೇಶಿಸಿ ಸಾಜಿ ಚೆರಿಯನ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆ ಇಂದು ಅವರು ರಾಜೀನಾಮೆ ನೀಡಿದ್ದಾರೆ.
ಸಂವಿಧಾನ ವಿರೋಧಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎಡಪಕ್ಷದ ನಾಯಕರಿಂದ ವಿವರಣೆ ಕೇಳಿದ್ದಾರೆ. ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಖಾನ್ ಅವರು ಕೇಳಿದ್ದು, ಸಚಿವರ ಹೇಳಿಕೆಗಳು ಸಂವಿಧಾನವನ್ನು ಉಲ್ಲಂಘಿಸಿದೆಯೇ ಎಂದು ಪರಿಶೀಲನೆ ಮಾಡಿದ್ದಾರೆ. ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ.