ವಿಜಯವಾಡ: ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ, ಜುಲೈ 7 ಗುರುವಾರದಂದು 41ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಸಹ, ಕ್ರಿಕೆಟ್ ವಲಯದಲ್ಲಿ ಧೋನಿ ಕ್ರೇಝ್ ಇನ್ನೂ ಕಿಂಚಿತ್ತೂ ಕಡಿಮೆಯಾಗಿಲ್ಲ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಕ್ಯಾಪ್ಟನ್ ಕೂಲ್ ಧೋನಿ ಮೈದಾನಕ್ಕಿಳಿಯುತ್ತಲೇ ಹರ್ಷೋದ್ಘಾರಗಳ ಮೂಲಕ ಮಿಂಚಿನ ಸಂಚಾರವಾಗುತ್ತದೆ.
ಟೀಮ್ ಇಂಡಿಯಾ ಮೂರು ಐಸಿಸಿ ಟ್ರೋಫಿ ಗೆಲ್ಲಲು ಸಾರಥ್ಯ ವಹಿಸಿದ್ದ ಏಕೈಕ ನಾಯಕ ಎಂಎಸ್ ಧೋನಿಗೆ ಗುರುವಾರ 41ರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಧೋನಿ ಅಭಿಮಾನಿಗಳು ಬರೋಬ್ಬರಿ 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. 2011, ಏಪ್ರಿಲ್ 2ರಂದು ಮುಂಬೈನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ ಧೋನಿ, 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಕಿರೀಟ ತೊಡಿಸಿದ್ದರು. ಧೋನಿ ಬ್ಯಾಟ್‌ನಿಂದ ದಾಖಲಾಗಿದ್ದ ʻಗೆಲುವಿನ ಸಿಕ್ಸರ್ʼ ಅನ್ನು ನೆನಪಿಸುವ ಕಟೌಟ್, ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ. ವಿಜಯವಾಡದ ಜೊತೆಗೆ ಚೆನ್ನೈ, ಸೇರಿದಂತೆ ದೇಶದ ಹಲವು ನಗರಗಳಲ್ಲಿ ಧೋನಿ ಕಟೌಟ್‌ಗಳು ರಾರಾಜಿಸುತ್ತಿವೆ.
ಸದ್ಯ ಕುಟುಂಬ ಸಮೇತ ಲಂಡನ್‌ನಲ್ಲಿರುವ ಧೋನಿ, ಅಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಲಂಡನ್‌ಗೆ ತೆರಳುವ ಮುನ್ನ ರಾಂಚಿಯಲ್ಲಿರುವ ಬಂಧನ್ ಸಿಂಗ್ ಖಾರ್ವಾರ್ ಎಂಬ ಆಯುರ್ವೇದ ವೈದ್ಯರನ್ನು ಭೇಟಿಯಾಗಿ ಧೋನಿ, ತಮ್ಮ ಮೊಣಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಕೇವಲ ₹40 ಪಾವತಿಸಿ ಕಾಡು ಸಸ್ಯಗಳನ್ನು ಬಳಸಿ ತಯಾರಿಸಲಾಗುವ ಔಷಧ ಪಡೆದಿದ್ದರು. ಜಗತ್ತಿನ ಯಾವುದೇ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯುವಷ್ಟು ಸಾಮರ್ಥ್ಯ ಹೊಂದಿದ್ದರೂ, ಧೋನಿ ಹಳ್ಳಿ ವೈದ್ಯರಿಂದ ಚಿಕಿತ್ಸೆ ಪಡೆದದ್ದು, ಅವರ ಸರಳತೆಗೆ ಸಾಕ್ಷಿಯಾಗಿತ್ತು.