ತಿರುವನಂತಪುರ: ಕೊಚ್ಚಿ ಸಮೀಪದ ಕಳಮಶ್ಶೇರಿಯಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದಾಗಿ ಮೂವರು ಬಲಿಯಾಗಿದ್ದರೆ, ಸ್ಫೋಟವನ್ನು ಕೋಮು ದ್ವೇಷ ಬೆಳೆಯಿಸಲು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿದವರ ವಿರುದ್ಧ ಇದುವರೆಗೆ 54 ಪ್ರಕರಣಗಳು ದಾಖಲಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ 26 ಪ್ರಕರಣಗಳು, ಎರ್ನಾಕುಲಂನಲ್ಲಿ 15 ಮತ್ತು ತಿರುವನಂತಪುರದಲ್ಲಿ 5 ಪ್ರಕರಣಗಳು ದಾಖಲಾಗಿವೆ. ತ್ರಿಶೂರ್ ನಗರ ಮತ್ತು ಕೊಟ್ಟಾಯಂನಲ್ಲಿ ತಲಾ 2, ಪತ್ತನಂತಿಟ್ಟ, ಆಲಪ್ಪುಝ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್‌ನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ’ ಎಂದು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಕೋಮು ದ್ವೇಷವನ್ನು ಪ್ರಚೋದಿಸಲು ಹಲವಾರು ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಲಾಗಿದೆ, ಈಗಾಗಲೇ ಇರುವ ನಕಲಿ ಪ್ರೊಫೈಲ್ಸ್ ಗಳನ್ನು ಬಳಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಪ್ರೊಫೈಲ್‌ಗಳ ಐಪಿ ವಿಳಾಸಗಳನ್ನು ಗುರುತಿಸಲು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್, ವಾಟ್ಸಾಪ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಮನವಿ ಮಾಡಿದ್ದೇವೆ. ಕೋಮು ದ್ವೇಷ ಹರಡದಂತೆ ತಡೆಗಟ್ಟಲು ಸೈಬರ್ ಇಲಾಖೆ 24 ಗಂಟೆ ಕಾರ್ಯಪ್ರವೃತ್ತವಾಗಿದೆ ಎಂದೂ ಕೇರಳ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.