ಕಲಬುರಗಿ: ಕಳೆದ ಹನ್ನೆರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಕೆಇಎ ನೇಮಕಾತಿ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಇಂದು ಆರ್‌ಡಿ ಪಾಟೀಲ್‌ನನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ಸಹಿ ಪಡೆದುಕೊಳ್ಳಲು ಆತನ ಕುಟುಂಬಸ್ಥರನ್ನು ಪೊಲೀಸ್ ಠಾಣೆಗೆ ಕರೆಸಲಾಗಿದ್ದು, ಆರ್ ಡಿ ಪಾಟೀಲ್ ಪತ್ನಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆ ಸಮಯದಲ್ಲಿ ಪತಿಯ ಸ್ಥಿತಿ ಕಂಡ ಪತ್ನಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ಕೋಟ್ಯಧಿಪತಿಯಾಗಿ ಮೆರೆದಿದ್ದ ಆರ್‌ಡಿ ಪಾಟೀಲ್ ನೆಲದ ಮೇಲೆ ಕೂತಿದ್ದನ್ನು ಕಂಡು ಪತ್ನಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ದುಃಖ ತಡೆಯಲಾಗದೆ ಪೊಲೀಸ್ ಠಾಣೆಯಿಂದ ಹೊರಬಂದು ಕಣ್ಣೀರು ಹಾಕುತ್ತಾ ದುಪ್ಪಟ್ಟದಿಂದ ಒರೆಸಿಕೊಳ್ಳುತ್ತಾ ಕಾರು ಹತ್ತಿ ಹಿಂದಿರುಗಿದ್ದಾರೆ.
ಪೊಲೀಸರು ಕೆಇಎ ನೇಮಕಾತಿ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನನ್ನು ಪತ್ತೆ ಹಚ್ಚಿ ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತಂದಿದ್ದರು.