Home ಕರಾವಳಿ ನ.15ರಂದು ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ

ನ.15ರಂದು ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ


ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ದ.ಕ. ಇವುಗಳ ಸಂಯುಕ್ತ ಆಶ್ರಯದಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ನ.15ರಂದು ಬೆಳಗ್ಗೆ 10:30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿರುವರು ಎಂದು ಮಾಹಿತಿ ನೀಡಿದ್ದಾರೆ.

ಗ್ರಾ.ಪಂ, ತಾಪಂ ಮತ್ತು ಜಿ.ಪಂ ತ್ರಿಸ್ತರದ ವ್ಯವಸ್ಥೆಯಾಗಿರುವ ಪಂಚಾಯತ್‌ರಾಜ್ ವ್ಯವಸ್ಥೆಯ ಕುಂದು ಕೊರತೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಮತ್ತು ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರು ಪಂಚಾಯತ್‌ರಾಜ್ ವ್ಯವಸ್ಥೆಗೆ ಕಾನೂನು ರೂಪಿಸಿ 30 ವರ್ಷ ತುಂಬಿದ ಸವಿನೆನಪಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಿಗೆ ಬಲಕೊಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ತಿದ್ದುಪಡಿ ತಂದು ಸಾಮಾಜಿಕ ನ್ಯಾಯ ಒದಗಿಸುವ ಕೊಡುವ ಮತ್ತು ಸ್ಥಳೀಯ ಸಂಸ್ಥೆಗೆ ಶಕ್ತಿ ನೀಡಿದರು. ಬಳಿಕ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಆರ್ಥಿಕ ಬಲ ನೀಡುವ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದಲ್ಲಿ ಎಸ್‌ಎಂ ಕೃಷ್ಣ , ಸಿದ್ದರಾಮಯ್ಯ ನೇತೃತ್ವದ ಸರಕಾರ ಪಂಚಾಯತ್ ವ್ಯವಸ್ಥೆಗೆ ಆರ್ಥಿಕ ಬಲವನ್ನು ನೀಡಿತ್ತು ಎಂದರು.


ಸಮಾವೇಶದಲ್ಲಿ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಸುದರ್ಶನ ಅವರು ಪಂಚಾಯತ್ ರಾಜ್ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ.
ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳ ತಲಾ ಒಬ್ಬ ಗ್ರಾಮ ಪಂಚಾಯತ್ ಪ್ರತಿನಿಧಿ , ತಾಪಂನ ಓರ್ವ ಮಾಜಿ ಅಧ್ಯಕ್ಷ ಮತ್ತು ಜಿ.ಪಂನ ಓರ್ವ ಮಾಜಿ ಅಧ್ಯಕ್ಷ ಪಂಚಾಯತ್ ರಾಜ್ ಬಗ್ಗೆ ವಿಚಾರ ಮಂಡಿಸಲಿದ್ದಾರೆ ಎಂದು ಸುಭಾಶ್ಚಂದ್ರ ಶೆಟ್ಟಿ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಆರ್‌ಜಿಪಿಆರ್‌ಎಸ್‌ನ ಸಂಚಾಲಕ ವಿಜಯ್ ಸಿಂಗ್ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕ ಬಿ. ರಮಾನಾಥ ಅವರು ಸಚಿವರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದು ಸುಭಾಶ್ಚಂದ್ರ ಶೆಟ್ಟಿ ವಿವರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮನಪಾ ವಿರೋಧ ಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ ಅಬ್ದುಲ್ ಸಲೀಂ, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕದ ಅಧ್ಯಕ್ಷರಾದ ವಿಶ್ವಾಸ್ಕುಮಾರ್ ದಾಸ್, ಬಿ ಎಂ ಅಬ್ಬಾಸ್ ಅಲಿ,ಲಾರೆನ್ಸ್ ಡಿ ಸೋಜ, ವೃಂದ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಹೈದರ್ ಕೈರಂಗಳ, ಜಗದೀಶ್ ಕೊಯಿಲ, ಶುಭೋದಯ ಆಳ್ವ, ಗಿರೀಶ್ ಶೆಟ್ಟಿ, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು

Join Whatsapp
Exit mobile version