ರಣಜಿ ಟ್ರೋಫಿ ನಾಕೌಟ್ ಹಂತದ ಪಂದ್ಯದ ಮೊದಲ ದಿನ ಅತಿಥೇಯ ಕರ್ನಾಟಕದ ವಿರುದ್ಧ ಉತ್ತರ ಪ್ರದೇಶದ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.
ಭಾನುವಾರ ರಾತ್ರಿ ಮಳೆ ಸುರಿದ ಪರಿಣಾಮ, ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಪಂದ್ಯವನ್ನು ಪ್ರಾರಂಭಿಸಲಾಯಿತು.
ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ಕರ್ನಾಟಕವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು.
ಬಲಿಷ್ಠ ಬ್ಯಾಟಿಂಗ್ ಪಡೆಯ ಆತ್ಮವಿಶ್ವಾಸದ ಅಲೆಯಲ್ಲಿ ಮೈದಾನಕ್ಕಿಳಿದ ಕನ್ನಡಿಗರಿಗೆ ತೇವಾಂಶದಿಂದ ಕೂಡಿದ್ದ ಪಿಚ್’ನಲ್ಲಿ ಬ್ಯಾಟಿಂಗ್ ನಡೆಸುವುದು ಸವಾಲಾಗಿತ್ತು.
ಆರಂಭಿಕ ಆರ್. ಸಮರ್ಥ್ ಆಕರ್ಷಕ ಅರ್ಧಶತಕ ದಾಖಲಿಸಿದನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್’ಗಳು ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.
ಕರುಣ್ ನಾಯರ್ (29), ಕೆ.ವಿ. ಸಿದ್ಧಾರ್ಥ್ (37) ಮತ್ತು ನಾಯಕ ಮನೀಶ್ ಪಾಂಡೆ (27) ರನ್’ಗಳಿಸುವಷ್ಟರಲ್ಲೇ ನಿರ್ಗಮಿಸಿದರು.
81 ಎಸೆತಗಳನ್ನು ಎದುರಿಸಿದ ಸಮರ್ಥ್, 10 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದರು.
ದಿನದಾಟದಲ್ಲಿ ದಾಖಲಾದ 72 ಓವರ್‌ಗಳ ಪೈಕಿ, 29 ಓವರ್‌ಗಳನ್ನು ಎಸೆದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ 64 ರನ್ ನೀಡಿ 4 ವಿಕೆಟ್ ಪಡೆದರು. ವೇಗಿ ಶಿವಂ ಮಾವಿ 40 ರನ್ ನೀಡಿ 3 ವಿಕೆಟ್ ಪಡೆದರು.
26 ರನ್’ಗಳಿಸಿರುವ ಶ್ರೇಯಸ್ ಗೋಪಾಲ್ ಮತ್ತು 12 ರನ್ ಗಳಿಸಿರುವ ವಿಜಯ ಕುಮಾರ್ ವೈಶಾಕ್ ಎರಡನೇ ದಿನ [ ಮಂಗಳವಾರ] ಬ್ಯಾಟಿಂಗ್ ಮುಂದುವರಿಸಲಿದ್ದಾರೆ.