ಬೆಂಗಳೂರು: ‘ಇಂಡಿಯಾ ಜಸ್ಟೀಸ್ ರಿಪೋರ್ಟ್ 2025’ ಬಿಡುಗಡೆಯಾಗಿದ್ದು, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ದಕ್ಷಿಣದ ರಾಜ್ಯಗಳೇ ಮುಂಚೂಣಿಯಲ್ಲಿದ್ದು, ಉತ್ತರದ ರಾಜ್ಯಗಳು ಕಳಪೆ ಪ್ರದರ್ಶನ ತೋರಿವೆ. ನ್ಯಾಯ ಒದಗಿಸುವ ಸಾಮರ್ಥ್ಯದ ವಾರ್ಷಿಕ ಶ್ರೇಯಾಂಕದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಈ ರಾಜ್ಯಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿರುವುದಾಗಿ ‘ಇಂಡಿಯಾ ಜಸ್ಟೀಸ್ ರಿಪೋರ್ಟ್ 2025’ ಉಲ್ಲೇಖಿಸಿದೆ. 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ (ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ ಮೊದಲ ಸ್ಥಾನ ದೊರೆತಿದೆ.
ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವಿನಲ್ಲಿ ರಾಜ್ಯಗಳ ಸಾಮರ್ಥ್ಯದ ಆಧಾರದ ಮೇಲೆ ಐಜೆಆರ್ ರ್ಯಾಂಕಿಂಗ್ ಪ್ರಕಟಿಸಲಾಗಿದೆ. ಕರ್ನಾಟಕ ಕಳೆದ ವರ್ಷವೂ ಅಗ್ರ ಸ್ಥಾನ ಗಳಿಸಿದ್ದು, ಈ ವರ್ಷ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷ ಐದನೇ ಸ್ಥಾನ ಪಡೆದಿದ್ದ ಆಂಧ್ರಪ್ರದೇಶ ಈ ವರ್ಷ ಎರಡನೇ ಸ್ಥಾನಕ್ಕೆ ಬಂದಿದೆ. 2019 ರಲ್ಲಿ ಹನ್ನೊಂದನೇ ಸ್ಥಾನ ಪಡೆದಿದ್ದ ತೆಲಂಗಾಣ ಈ ಬಾರಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
ಪ್ರಬಲ ಪ್ರದರ್ಶನ ನೀಡಿದ ಕೇರಳ ಮತ್ತು ತಮಿಳುನಾಡು ಸಣ್ಣ ಏರಿಳಿತಗಳ ಹೊರತಾಗಿಯೂ ಮೊದಲ ಐದರಲ್ಲಿ ಸ್ಥಾನ ಪಡೆದಿವೆ ಎಂದು ವರದಿ ತಿಳಿಸಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಶಾದ ಮಧ್ಯಮ ಶ್ರೇಣಿಯ ರಾಜ್ಯಗಳು ಸ್ಥಿರವಾದ ಸುಧಾರಣೆಯನ್ನು ಕಂಡಿವೆ. ಈ ಹಿಂದೆ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ರವು ಈ ಬಾರಿ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಗುಜರಾತ್ ಮತ್ತು ಪಂಜಾಬ್ ಕಳಪೆ ಪ್ರದರ್ಶನ ತೋರಿವೆ ಎಂದು ವರದಿ ತಿಳಿಸಿದೆ.
ಬಿಹಾರ, ರಾಜಸ್ಥಾನ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಸಣ್ಣ ಬದಲಾವಣೆಗಳೊಂದಿಗೆ ಕೊನೆಯ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಹಿಂದಿನ ಬಾರಿ ಕೊನೆಯ ಸ್ಥಾನದಲ್ಲಿದ್ದ ಉತ್ತರ ಪ್ರದೇಶವು ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದ್ದರೆ, ಪಶ್ಚಿಮ ಬಂಗಾಳ ಕೊನೆಯ ಸ್ಥಾನದಲ್ಲಿದೆ.