Home ಟಾಪ್ ಸುದ್ದಿಗಳು ಪುನೀತ್ ರಾಜ್ ಕುಮಾರ್ ಅವಹೇಳನ…! ನಕಲಿ ಜೋತಿಷಿ ಬಂಧನಕ್ಕೆ ಕರ್ನಾಟಕ ರಣಧೀರ ಪಡೆ ಆಗ್ರಹ

ಪುನೀತ್ ರಾಜ್ ಕುಮಾರ್ ಅವಹೇಳನ…! ನಕಲಿ ಜೋತಿಷಿ ಬಂಧನಕ್ಕೆ ಕರ್ನಾಟಕ ರಣಧೀರ ಪಡೆ ಆಗ್ರಹ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಿರುವ ನಕಲಿ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ರಣಧೀರ ಪಡೆ ಆಗ್ರಹಿಸಿದೆ.


ಈ ಬಗ್ಗೆ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಬಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರಿನ ಸಾರಾಂಶ:
ಪುನೀತ್ ರಾಜ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಬಾರ್ ಗಳನ್ನು ಬಂದ್ ಮಾಡಿದ್ದನ್ನು ಟೀಕಿಸುವ ಜೊತೆ ಜೊತೆಗೆ ಪುನೀತ್ ರನ್ನು ಅವಹೇಳನ ಮಾಡಿದ ಉತ್ತರ ಭಾರತೀಯನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕೆಲಸವನ್ನು ಕರ್ನಾಟಕ ರಣಧೀರ ಪಡೆ ಶ್ಲಾಘಿಸುತ್ತದೆ. ಆ ಉತ್ತರ ಭಾರತದ ವಿಕೃತವ್ಯಕ್ತಿ ನೇರವಾಗಿ ಪುನೀತ್ ರಾಜ್ ಕುಮಾರ್ ಹೆಸರು ಹಾಕಿ ಬರೆದುಕೊಂಡಿದ್ದ. ಇಲ್ಲೊಬ್ಬ ನಕಲಿ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ಎಂಬಾತ ಪುನೀತ್ ರಾಜ್ ಕುಮಾರ್ ಹೆಸರು ಹಾಕದೇ “ಅಡಿಕೆ ಉದುರಿ ಬಿದ್ದಿದ್ದು ಸರಿಯಾಗಿಯೇ ಇದೆ’ ಎಂದು ಬರೆದುಕೊಂಡಿದ್ದಾನೆ. ಅದರ ಜೊತೆಗೆ “ದೇವರು ಒಳ್ಳೆಯವರನ್ನು ಬೇಗ ಕರೆದುಕೊಂಡು ಹೋಗುತ್ತಾನೆ ಎಂಬ ಜನರ ನಾಣ್ಣುಡಿ ತಪ್ಪು. ದೇವರು ಸರಿಯಾಗಿಯೇ ಮಾಡಿದ್ದಾನೆ ಎಂದೂ ಈ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ಬರೆದುಕೊಂಡಿದ್ದಾನೆ.
ಪುನೀತ್ ರಾಜ್ ಕುಮಾರ್ ರವರ ಅಂತ್ಯಸಂಸ್ಕಾರದ ಬಗ್ಗೆ ಅಮ್ಮಣ್ಣಾಯ ಆಕ್ಷೇಪ ವ್ಯಕ್ತಪಡಿಸಿದ್ದಾನೆ. “ಅಗರ್ಭ ಶ್ರೀಮಂತನ ಕಾರ್ಯಕ್ರಮವೂ ಅಡುಗೆ ಹಾಳಾದರೆ ಅಪಖ್ಯಾತಿಗೆ ಒಳಗಾದೀತು.

ಶ್ರೀಮಂತಿಕೆಯೂ ಇದೆ, ಅಡುಗೆಯೂ ರುಚಿಯಾಗಿದ್ದು, ಅದನ್ನು ಬಡಿಸುವಿಕೆಯು ಅಬದ್ಧ ಆದರೂ ಸಾಕು ಅಪಖ್ಯಾತಿಗೆ’ ಎಂದು ಬರೆದುಕೊಂಡಿದ್ದಾನೆ. ವೈದಿಕ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿಲ್ಲ ಎಂಬುದು ಪ್ರಕಾಶ್ ಅಮ್ಮಣ್ಣಾಯರ ಕುದಿಯುವಿಕೆ ಕಾರಣ. ಪುನೀತ್ ರಾಜ್ ಕುಮಾರ್ ರವರು ಜಿಮ್ ಗೆ ಹೋಗುತ್ತಿದ್ದರು ಎಂಬ ವಿಷಯವನ್ನೂ ಪ್ರಕಾಶ್ ಅಮ್ಮಣ್ಣಾಯ ಕಲ್ಪಿತ ಕತೆಯ ಮೂಲಕ ವ್ಯಂಗ್ಯ ಮಾಡಿದ್ದಾರೆ.


ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯು ಸರ್ಕಾರ ಮತ್ತು ಕುಟುಂಬಸ್ಥರ ಒಮ್ಮತದಂತೆ ಸಕಲ ಸರ್ಕಾರಿ ಗೌರವ ಮತ್ತು ಈಡಿಗ ಸಂಪ್ರದಾಯದಂತೆ ನಡೆಯಿತು. ವೈದಿಕ ಸಂಪ್ರದಾಯಗಳನ್ನು ಆಚರಿಸದೇ ಇರುವುದರಿಂದ ಸಸ್ಯಾಹಾರಿಗಳ ಸಂಪ್ರದಾಯ ಮತ್ತು ಮಾಂಸಹಾರಿಗಳ ಸಂಪ್ರದಾಯದ ಬಗ್ಗೆ ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿರುವ ಪ್ರಕಾಶ್ ಅಮ್ಮಣ್ಣಾಯ ಮಹಾಭಾರತ ರಾಮಾಯಣ ಕಾಲದಲ್ಲೂ ಮಾಂಸಾಹಾರ ಇತ್ತು. ಯಾರು ತಿನ್ನುತ್ತಿದ್ದರು? ಬಕಾಸುರಾದಿ ರಾಕ್ಷಸರು ಎಂದು ಬರೆದುಕೊಂಡಿದ್ದಾನೆ. ನಾವು ಆರೋಪಿಸುತ್ತಿರುವ ಸದ್ರಿ ಪ್ರಕಾಶ್ ಅಮ್ಮಣ್ಣಾಯನು ಜೋತಿರ್ಷಿಜ್ಞಾನಿ ಎಂದು ಹೇಳಿಕೊಂಡು ಜನರನ್ನು ನಿರಂತರವಾಗಿ ವಂಚಿಸುತ್ತಿದ್ದು ಇದೀಗ ಪುನೀತ್ ರಾಜಕುಮಾರ್ ಹೆಸರಿಗೆ ಮಸಿ ಬಳಿಯಲು ಯತ್ನ ನಡೆಸುತ್ತಿದ್ದಾನೆ. ಪುನೀತ್ ನಿಧನರಾದ ಬಳಿಕ ಈ ರೀತಿಯ ಅಟ್ಟಹಾಸ, ವಿಕಟ ಹಾಸ್ಯದ, ಪರೋಕ್ಷ ವ್ಯಂಗ್ಯದ ಬರಹಗಳನ್ನು ನಿರಂತರವಾಗಿ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದಾನೆ. ಸದ್ರಿ ಆರೋಪಿ ಪ್ರಕಾಶ್ ಅಮ್ಮಣ್ಣಾಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಬಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.

Join Whatsapp
Exit mobile version