ಬೆಂಗಳೂರು: ಕನ್ನಡ ಪರ ಸಂಘಟನೆಗಳು ಶನಿವಾರ (ಮಾರ್ಚ್ 22) ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಹೀಗಾಗಿ, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ? ಇಲ್ಲವೋ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿದೆ.
ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಹಲ್ಲೆ, ಬಸ್ ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆಯಲಾಗಿದೆ. ಹೀಗಾಗಿ ಮರಾಠಿಗರ ಅಟ್ಟಹಾಸ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸಿಡಿದು ನಿಂತ್ತಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಸದ್ಯ ಇದಕ್ಕೆ ವಿವಿಧ ಸಂಘಟನೆಗಳು ನೈತಿಕ, ಬಾಹ್ಯ ಬೆಂಬಲ ನೀಡಿವೆ. ಇದರಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ. ಆದರೆ, ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ – ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರಿಗೆ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ.
ಬಂದ್ ಹಿನ್ನಲೆ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಬೆಳಿಗ್ಗೆ ಪ್ರತಿಭಟನೆ, ರ್ಯಾಲಿಗಳು ನಡೆಯಲಿವೆ. ಪ್ರತಿಭಟನಾ ನಿರತರು ರಸ್ತಗಿಳಿದು ಮಹಾರಾಷ್ಟ್ರ, ಮರಾಠಿಗರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿ ಭಿತ್ತಿಪತ್ರ ಪ್ರದರ್ಶನ, ಧಿಕ್ಕಾರ, ಘೋಷಣೆಗಳು, ಭಾಷಣಗಳು ಇರಲಿವೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್ ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿರಲಿದೆ. ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬಂದ್ ನ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟವು ನೈತಿಕ ಬೆಂಬಲ ನೀಡಿದೆ. ಆದರೆ, ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದರು. ಬೆಂಗಳುರು ಸೇರಿದಂಎ ಹಲವು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಂದ್‌ಗೆ ನೇರ ಬೆಂಬಲ ನೀಡುವುದಿಲ್ಲ. ಶಾಲಾಗಳಿಗೆ ರಜೆ ಕೂಡ ನೀಡಲ್ಲ. ಎಂದಿನಂತೆ ಶಾಲೆಗಳು ತೆರೆದಿರಲಿವೆ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿ ಖಾಸಗಿ ಕಾಲೇಜುಗಳು ಕೂಡ ರಜೆ ಇಲ್ಲ.
ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಹಲ್ಲೆಯಾಗಿರುವುದನ್ನ ನಾವು ಖಂಡಿಸಿ ಬಂದ್ ಮಾಡುತ್ತಿದ್ದೇವೆ. ಇಡಿ ಆಟೋ ರಿಕ್ಷಾ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಶ್ರೀ ನಿವಾಸ್ ಹೇಳಿದ್ದಾರೆ.
ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಅಶೋಕ್ ಪ್ರತಿಕ್ರಿಯಿಸಿದ್ದು, ನಾಡು, ನುಡಿ, ಭಾಷೆಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ಎಲ್ಲಾ ಹೋರಾಟಗಳಿಗೆ ನಾವು ಸದಾಕಾಲ ಬೆಂಬಲ ನೀಡುತ್ತಿವೆ. ಸುಮಾರು ಎರಡು ಲಕ್ಷ ಓಲಾ, ಉಬರ್ ಬಂದ್ ಮಾಡುತ್ತೇವೆ ಎಂದಿದ್ದಾರೆ. ಅದೇ ರೀತಿಯಾಗಿ ಕಾರ್ಮಿಕ ಪರಿಷತ್ ಸಂಪೂರ್ಣ ನಾಡಿನ ಹಿತಕ್ಕಾಗಿ ಬೆಂಬಲ ಇದೆ. ಸ್ವಯಂವಾಗಿ ನಾವು ಕೆಲಸಕ್ಕೆ ಗೈರಾಗುವು ಮೂಲಕ ಬೆಂಬಲ ನೀಡುತ್ತೇವೆ. ಎಲ್ಲಾ ಕಾರ್ಮಿಕ ಇಲಾಖೆಗಳ ಕಾರ್ಮಿಕರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಕಾರ್ಮಿಕ ಪರಿಷತ್ತು ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.
ಬಂದ್ ದಿನ ಎಂದಿನಂತೆ ಹೋಟೆಲ್ಗಳು ತೆರೆದಿರುತ್ತೆ. ಆ ಮೂಲಕ ಹೋಟೆಲ್ ಅಸೋಸಿಯೇಷನ್ನಿಂದ ಕೇವಲ ನೈತಿಕ ಬೆಂಬಲ ನೀಡಲಾಗುತ್ತಿದೆ. ಹೋಟೆಲ್ ಅಗತ್ಯ ಸೇವೆಯಾಗಿರುವುದರಿಂದ ಓಪನ್ ಮಾಡಲಾಗುತ್ತಿದೆ ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಸ್ಟಷ್ಟನೆ ನೀಡಿದ್ದಾರೆ.
ಬಂದ್ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಮಾ.22 ಕ್ಕೆ ಕರ್ನಾಟಕ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ. ಈಗಾಗಲೇ ಬಹುತೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ. ಮರಾಠಿಗರ ಪುಂಡಾಟಿಕೆ ಮರಾಠಿಗರ ಅಟ್ಟಹಾಸ, ಎಂ.ಇ.ಎಸ್ ನಿಷೇಧ ಮಾಡಬೇಕು. ಕಳಸಾ ಬಂಡೂರಿ ಮಹಾದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು ಎಂದಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುವುದು. ಕನ್ನಡಿಗರು ಈ ಬಂದ್‌ಗೆ ಕೈಜೋಡಿಸಬೇಕು. ಸಮಗ್ರ ಕನ್ನಡಿಗರಿಗಾಗಿ ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಕರ್ನಾಟಕ ಬಂದ್ ಮಾಡಲಾಗುತ್ತದೆ. ಬೆಳಗಾವಿಯಿಂದ ಚಾಮರಾಜನಗರವರೆಗೆ ಬಂದ್ ಮಾಡಲಾಗುವುದು. ಬೆಳಗಾವಿ ಕನ್ನಡಿಗರ ಕೈಯಲ್ಲಿ ಇಲ್ಲ ಮರಾಠಿಗರ ಕೈಯಲ್ಲಿ ಇದೆ ಎಂದು ಹೇಳಿದ್ದಾರೆ.