ಕಣ್ಣೂರು: ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ ವಧುವಿನ ಮನೆಗೆ ಮರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಾಂಬ್ ಒಂದು ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಏಚೂರು ನಿವಾಸಿ ಜಿಷ್ಣು [26] ಎಂದು ಗುರುತಿಸಲಾಗಿದೆ. ಜಿಷ್ಣುವಿನ ಸ್ನೇಹಿತರಾದ ಹೇಮಂತ್ ಹಾಗೂ ಅರವಿಂದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣ್ಣೂರಿನ ತೊಟ್ಟಡ ಎಂಬಲ್ಲಿರುವ ವಧುವಿನ ಮನೆಯ ಸಮೀಪ ಘಟನೆ ನಡೆದಿದ್ದು, ಬಾಂಬ್ ಸ್ಫೋಟದ ಹಿಂದಿನ ನಿರ್ದಿಷ್ಟ ಕಾರಣವೇನೆಂದು ತಿಳಿದುಬಂದಿಲ್ಲ. ಶನಿವಾರ ರಾತ್ರಿ ಮದುವೆ ಮನೆಯಲ್ಲಿ ತಡರಾತ್ರಿಯವರೆಗೆ DJ ಪಾರ್ಟಿ ನಡೆದಿದ್ದು, ಈ ವಿಚಾರದಲ್ಲಿ ಸಮೀಪದ ಮನೆಯವರು ಜಗಳ ಮಾಡಿಕೊಂಡಿದ್ದರು. ಆದರೆ ಈ ಗಲಾಟೆಯನ್ನು ಮಾತುಕತೆ ನಡೆಸಿ ಪರಿಹರಿಸಲಾಗಿತ್ತು. ಭಾನುವಾರ ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ ಮರಳುವಾಗ ವಧುವಿನ ಮನೆ ಸಮೀಪ ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಪೋಟಗೊಂಡಿದೆ.
ಮೂಲಗಳ ಪ್ರಕಾರ ಮೃತ ಜಿಷ್ಣು, ಬೇರೆ ಸ್ಥಳದಲ್ಲಿ ಸ್ಪೋಟಿಸುವ ಉದ್ದೇಶದಿಂದ ತನ್ನ ಬಳಿ ಎರಡು ಬಾಂಬ್’ಅನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದರಲ್ಲಿ ಒಂದು ಬಾಂಬ್ ಸ್ಫೋಟಗೊಂಡಿದ್ದು, ಇನ್ನೊಂದು ಬಾಂಬ್’ಅನ್ನು ಘಟನಾ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಈ ವಿಚಾರವನ್ನು ಧೃಡಪಡಿಸಿಲ್ಲ.