ಹುಬ್ಬಳ್ಳಿ: ಹಿಜಾಬ್ – ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಚ್ಚಲ್ಪಟ್ಟಿದ್ದ 10 ನೇ ತರಗತಿಯವರೆಗಿನ ಪ್ರೌಢಶಾಲೆಗಳು ನಾಳೆ ಪುನಾರಂಭಗೊಳ್ಳಲಿವೆ. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ವಿಶ್ವವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೌಹಾರ್ದಯುತ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಪ್ರಮುಖ ಶಾಲೆಗಳಲ್ಲಿ ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಶಾಂತಿ ಸಭೆಗಳನ್ನು ನಡೆಸಲು ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಪರಿಸ್ಥಿತಿ ಅವಲೋಕಿಸಿದ ಬಳಿಕ ಕಾಲೇಜುಗಳು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಂತಿ ನೆಲೆಸಲಿದೆ. ಶಾಲೆಗಳು ಶಾಂತಿಯುತವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ವಿದ್ಯಾರ್ಥಿಗಳು ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು ಮತ್ತು ಮಾರ್ಚ್-ಏಪ್ರಿಲ್ ವೇಳೆಗೆ ಪರೀಕ್ಷೆಗಳಿಗೆ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ಹಿಜಾಬ್ -ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ) ಅಡಿಯಲ್ಲಿರುವ ಕಾಲೇಜುಗಳಿಗೆ ಫೆಬ್ರವರಿ 9 ರಿಂದ ಮೂರು ದಿನಗಳ ಕಾಲ ಘೋಷಿಸಲಾದ ರಜೆಯನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿತ್ತು.
ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ವಿಸ್ಕೃತ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.