ಒಟ್ಟಾವಾ: ಕೆನಡಾದ ಪ್ರಧಾನಿ ಹುದ್ದೆಗೆ ಕರ್ನಾಟಕ ಮೂಲದ ಚಂದ್ರ ಆರ್ಯ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಲಿಬರಲ್ ಪಕ್ಷದಿಂದ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿ ಚಂದ್ರ ಆರ್ಯ ಗಮನ ಸೆಳೆದಿದ್ದಾರೆ.
ಸದನವನ್ನು ಉದ್ದೇಶಿಸಿ ಆರ್ಯ ಅವರು ತಮ್ಮ ಪರಂಪರೆಯ ಬಗ್ಗೆ ಅಪಾರ ಹೆಮ್ಮೆಯಿಂದ ಮಾತನಾಡಿದರು. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಲು ಗ್ರಾಮದ ವ್ಯಕ್ತಿಯೊಬ್ಬರು ಕೆನಡಾದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈಗ ಈ ಗೌರವಾನ್ವಿತ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದರು.
ಭಾಷಣದ ಕೊನೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಹಾಗೂ ನಟ ಡಾ.ರಾಜ್ ಕುಮಾರ್ ಅವರು ಹಾಡಿದ್ದ ಪ್ರಸಿದ್ಧ ಹಾಡಿನ ಸಾಲನ್ನು ಹೇಳಿದರು. ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹೇಳಿ ತಮ್ಮ ಮಾತಿಗೆ ಪೂರ್ಣ ವಿರಾಮ ಹಾಕಿದರು. ಈ ಹಿಂದೆ ಸಂಸದರಾಗಿ ಆಯ್ಕೆಯಾದ ವೇಳೆಯೂ ಸಂಸತ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದರು.