Home ಟಾಪ್ ಸುದ್ದಿಗಳು ಬಿಜೆಪಿ ಸರಕಾರ ಬಂದ ಮೇಲೆ ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚಿದೆ: ಕುಮಾರಸ್ವಾಮಿ ಟೀಕಾಪ್ರಹಾರ

ಬಿಜೆಪಿ ಸರಕಾರ ಬಂದ ಮೇಲೆ ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚಿದೆ: ಕುಮಾರಸ್ವಾಮಿ ಟೀಕಾಪ್ರಹಾರ

ಬಿಡದಿ: ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಕನ್ನಡ ಮತ್ತು ಕನ್ನಡಿಗರ ಮೇಲೆ ಹೆಚ್ಚು ದಬ್ಬಾಳಿಕೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿಯಲ್ಲಿ ಇಂದು ಪುರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ರಾಷ್ಟ್ರೀಯ ಪರಿಕ್ಷಾ ಸಂಸ್ಥೆ ಭಾನುವಾರ ನಡೆಸಿರುವ ಯುಜಿಸಿ – ಎನ್ ಇಟಿ ಪರೀಕ್ಷೆಯ ಕನ್ನಡ ಭಾಷಾ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಿ ಇದ್ದ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲಿ ಇದ್ದರೆ, ಉಳಿದ ಹತ್ತು ಪ್ರಶ್ನೆಗಳು ಮಾತ್ರ ಕನ್ನಡಲ್ಲಿ ಇದ್ದವು. ಇದು ಅತ್ಯಂತ ಖಂಡನೀಯ ಎಂದರು.

ಪದೇ ಪದೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರದ ನಿಲುವು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮನೋಭಾವದ ಬಗ್ಗೆ ಮೊದಲಿನಿಂದಲೂ ವಿರೋಧಿಸಿದ್ದೇನೆ. ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ರಾಜ್ಯದ ಜನರು ಸಹ ಹಿಂದಿ ಹೇರಿಕೆ ವಿರುದ್ಧ ದನಿ  ಎತ್ತಬೇಕಿದೆ.ಕನ್ನಡ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದು ಹೆಚ್ಚುತ್ತಿದೆ. ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರದ ನಿಲುವು ಖಂಡಿಸುತ್ತೇನೆ ಎಂದ ಅವರು; ಕನ್ನಡ ಭಾಷೆಯನ್ನು ಅವಮಾನ ಮಾಡಬೇಡಿ. ಕನ್ನಡಿಗರ ಸ್ವಾಭಿಮಾನವನ್ನ ಕೆಣಕಬೇಡಿ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ರಾತ್ರಿ ಕರ್ಫ್ಯೂ ನಿರುಪಯುಕ್ತ:

ಕೋವಿಡ್ ಹೊಸ ತಳಿ ಒಮಿಕ್ರಾನ್ ನಿಯಂತ್ರಣಕ್ಕೆ ಸರಕಾರ ಹೇರುತ್ತಿರುವ ರಾತ್ರಿ ಕರ್ಫ್ಯೂ ನಿರುಪಯುಕ್ತ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ನೈಟ್ ಕರ್ಫ್ಯೂ ಹಾಗೂ ಶೇ.50ರಷ್ಟು ನಿರ್ಬಂಧದಿಂದ ಯಾವುದೇ ಪ್ರಯೋಜನ ಇಲ್ಲ. ಕಳೆದ 2 ವರ್ಷದಿಂದ ವ್ಯಾಪಾರಸ್ಥರು ಪೆಟ್ಟು ತಿಂದಿದ್ದಾರೆ. ಈಗಾಗಲೇ ವ್ಯಾಪಾರಸ್ಥರು ಸರಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ಇಬ್ಬಗೆಯ ನೀತಿ ಹೊಂದಿದೆ. ರಾಜಕೀಯ ಸಭೆಗೆ ಏಕೆ ನಿರ್ಬಂಧವಿಲ್ಲ. ರಾಜಕೀಯ ಸಭೆಗೆ ಎಷ್ಟು ಜನ ಬೇಕಾದರೂ ಸೇರಬಹುದಾ? ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್ ಪಕ್ಷಕ್ಕೆ 20ಕ್ಕಿಂತ ಅಧಿಕ ಸ್ಥಾನ:

ಬಿಡದಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 20ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಈ ಬಾರಿ ಚುನಾವಣೆಗೆ ಭಾರೀ ಪೈಪೋಟಿ ಇತ್ತು. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದೇನೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹೀಗಾಗಿ ಮತದಾರರು ಕೈ ಹಿಡಿಯುತ್ತಾರೆ. 20ಕ್ಕಿಂತ ಅಧಿಕ ಸ್ಥಾನದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಗಡಿ ಶಾಸಕರಾದ ಮಂಜುನಾಥ್ ಮುಂತಾದವರು ಜತೆಯಲ್ಲಿದ್ದರು.

Join Whatsapp
Exit mobile version